ಕಪ್ಪು ನಕ್ಷತ್ರ

ನಾ ಕಣ್ಣು ಬಿಟ್ಟು ಜಗತ್ತು ನೋಡುವ ಹೊತ್ತಿಗೆ ಅಪ್ಪ, ಬಿದಿರಿನ ರಥವೇರಿ ಪಶ್ಚಿಮ ದಿಗಂತದಲಿ ಅಸ್ತಂಗತನಾಗಿದ್ದ.

ಅಪ್ಪ ಇರುವಷ್ಡು ದಿವಸ ಊರಜನರ ಮಾನ ಮುಚ್ಚುವ ಕೆಲಸವನ್ನು ನಿಯತ್ತಾಗಿ ನೀಗಿಸಿದ್ದ.

ಬಟ್ಟೆ ಹರಿದ ಮೇಲೆ ಊರ ಜನ ಅಪ್ಪನನ್ನು ಮರತೇ ಹೋಗಿದ್ದರು.

ಅಪ್ಪನ ಹೆಸರಲ್ಲಿ ಯಾರೂ ಒಂದು ತುತ್ತು ಅನ್ನ ಕೊಡುವದಿಲ್ಲ ಎಂಬ ಸತ್ಯ ಅವ್ವಳಿಗೆ ತಿಳಿದು ಹೋಗಿತ್ತು.

ಅಜ್ಜಿ-ಅವ್ವ , ಹಾವು ಮುಂಗುಸೀಯ ಪಾತ್ರವನ್ನು ಯಾವ ತಪ್ಪೂ ಇಲ್ಲದಂತೆ ಮಾಡಿ ಮುಗಿಸಿದ್ದರು.

ಅಪ್ಪನ ಮೂರು ಪಳಿಯುಳಕೆಗಳನ್ನು ಅವ್ವ ಹೆಗಲ ಮೇಲೆ, ಟೊಂಕದಲ್ಲಿ, ಕೈಯಲ್ಲಿ, ಹಿಡಿದು ಸಾಗಿದ್ಲು.

ಸೂರ್ಯ ನೆತ್ತಿ ಏರಿ ಪಶ್ಚಿಮದಲ್ಲಿ ಡುಮಕಿ ಹೊಡೆಯುವವರೆಗೆ ಅವ್ವ ಕರಿ ನೆಲದ ಸೇವೆ ಮಾಡಿದ್ಲು.

ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವ ಎಂಬ ಪದ ಜೋಕಾಲಿ ತೂಗಿಕೊಂಡು ಹಾಡುತ್ತಿತ್ತು.

ಅವ್ವಳ ಅಣ್ಣಂದಿರು ಐಸ ಮಾತ ಹೇಳಿ ನೈಸಾಗಿ ಗುಬ್ಬಿ ಗೂಡು ಕಿತ್ತು ರಸ್ತೆಗೆ ಎಸೆದಿದ್ದರು.

ಮೂರು ತುತ್ತಿನ ಚೀಲ ತುಂಬಿಸಲು ಅವ್ವ ಬಿಸಿಲಿಗೆ ಮೈ ಒಡ್ಡಿ ಕಪ್ಪು ಸುಂದರಿಯಾಗಿದ್ಲು.

ನಮ್ಮ ಮೂರು ಜನರ ಬದುಕು ಕಟ್ಟಿಕೊಳ್ಳಲು ಅವ್ವ ಕಲ್ಲು ಮಣ್ಣು ಹೊತ್ತಿದ್ದಳು.

ಅಪ್ಪ ಬಾನಂಗಳದ ನಕ್ಷತ್ರವಾಗಿದ್ರೆ ಅವ್ವ ನಮ್ಮ ಜೊತೆ ಇರುವ ಜೀವಂತ ಕಪ್ಪು ನಕ್ಷತ್ರವಾದಳು.

- Siddugouda

31 Mar 2020, 05:32 pm
Download App from Playstore: