ಕೊರೋನಾ ಕವಿತೆ

ಕೊರೋನಾ ಕವಿತೆ


ಕಿರೀಟ ಧರಿಸಿ

ರಾಜರ ಹಾಗೆ - ಬಂದಿದ್ದಿ

ಗಡಿ ದಾಟಿ, ಸಮುದ್ರ ಉಲ್ಲಂಘಿಸಿ

ಸದ್ದಿಲ್ಲದೇ ನುಗ್ಗಿದ್ದಿ


ರಾಜರುಗಳ ಹಾಗೆ ಪಾಲಿಸುವುದನ್ನು ಮರೆತು,

ದೇಶ ಧರ್ಮ ಜಾತಿ ನೀತಿ ಸಿರಿತನ ಬಡತನಗಳ ಲೆಕ್ಕಿಸದೆ.

ಪೀಡಿಸುವುದೇ ನಿನ್ನ ಧರ್ಮ

ಅಂತ ನಿರ್ದಾಕ್ಷಿಣ್ಯವಾಗಿ ಸಾರಿದ್ದಿ.


ಈಗ ಎಲ್ಲೆಲ್ಲೂ  ಇದೊಂದೇ ಸುದ್ದಿ-

ಹತ್ತೊಂಭತ್ತರ "ಕೋವಿದ"

ಇಪ್ಪತ್ತಕ್ಕೂ ಕೈಕಾಲು ಚಾಚಿದ್ದಿ

ಬಾಚಿದ್ದಿ ಜೀವಗಳ ರಾಶಿ ರಾಶಿ.


ನುಗ್ಗಿ ಬರುವಾಗ ಪೌರತ್ವದ ಹಂಗಿಲ್ಲ

ನಿನಗೆ  -  ಪ್ರತಿಭಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ

ಊರಿಂದೂರಿಗೆ ಹೋಗುವಂತಿಲ್ಲ ಬೇರಾರೂ

ದೂರ ದೂರ ಸರಿಸಿಬಿಟ್ಟಿದ್ದಿ .

ಸ್ವಕೀಯ- ಪರಕೀಯದ ಭೇದವಿಲ್ಲದೇ

ಸಲೀಸಾಗಿ ಜನರನ್ನು - ತಬ್ಬುವ ಬದಲಾಗಿ ದಬ್ಬುವುದೇ

ಕ್ಷೇಮ ಮೂಗು ಮುಚ್ಚಿಕೊಂಡು - ಅಂತ ಸಾರಿದ್ದಿ.


ಅಹಂಕಾರದ ಅಡಿಪಾಯಕ್ಕೆ ಅಪಾಯದ

 ಬಿಸಿ ಮುಟ್ಟಿಸಿದ್ದಿ

ಯುವಾನ್ ಯೂರೋ ಡಾಲರ್ ಮತ್ತೆಲ್ಲಾ

ದುಡ್ಡುಗಳ ಠೇಂಕಾರದ ಘರ್ಜನೆಗಳೆಲ್ಲಾ

ಅದೆಷ್ಟು ಟೊಳ್ಳಂದು ತೋರಿದ್ದಿ- ಮುಲಾಜಿಲ್ಲದೇ.


ದಿನ ಕಳೆದಂತೆ ಖಂಡದಿಂದ ಖಂಡಕ್ಕೆ ಜಿಗಿಯುತ್ತಾ

ಬಲಶಾಲಿಗಳ ಬತ್ತಳಿಕೆಯ ಖಂಡಾಂತರ ಕ್ಷಿಪಣಿ

ಭಂಡಾರಗಳು ನಾಚಿ ನೀರಾಗುವಂತೆ ಮಾಡಿದ್ದಿ.


ಪ್ರಣಾಳದಲ್ಲಿಯೇ ಜೀನು, ಡಿ.ನ್.ಎ ಗಳ ಬೆರೆಸಿ

‘ಜೀವ'  ನಿರ್ಮಿಸಿ ಸೃಷ್ಟಿಕರ್ತನಿಗೆ ಸರಿಸಾಟಿಯೆಂಬಂತೆ

ಬೀಗಿದವರು ಇಂದು ತಮ್ಮ ಕೈಗಂಟಿದೆಯೋ ಸಾವಿನ

ಬೀಜ ಎಂಬಂತೆ ಉಜ್ಜಿ ಉಜ್ಜಿ ಕೈ ತೊಳೆದುಕೊಳ್ಳುತ್ತಾ

ಅವರದ್ದೇ ಒಂದು ಕೈ ಇನ್ನೊಂದಕ್ಕೆ ತಗುಲಿದರೆ ಎಲ್ಲಿ

ರೋಗ ಬಂದೀತೆಂದು ಅಂಜಿ ಅಂಜಿ ನೀರಾಗುವಂತೆ ಮಾಡಿದ್ದಿ.


ದಿನ ರಾತ್ರಿ ಎನ್ನದೆ ಚೆಲ್ಲಾಪಿಲ್ಲಿಯಾಗಿರುತ್ತಿದ್ದ ಮನೆ

ಮಂದಿ ಆಹಾ ಅದೆಷ್ಟು 'ಸುಭಗ'ರಾಗಿಬಿಟ್ಟಿದ್ದಾರೆ.

ಅಪ್ಪ ಅಮ್ಮ ಅಜ್ಜ ಅಜ್ಜಿ ಅಣ್ಣ ತಂಗಿ ಎಲ್ಲಾ

ಏಕಕಾಲದಲ್ಲಿ ಒಂದೇ ಸೂರಿನಡಿ -

ಅದೆಷ್ಟು ಮಜಾ -'ಕೂಡಿ ಉಣ್ಣುವ

- ಕೂಡಿ ಆಡುವ' ಹಳೆಗಾಲದ

ಮೌಲ್ಯಗಳಿಗೆ ಮರುಜೀವ !

ಆಹಾ ಮಧುರ ಕ್ಷಣಗಳು ಸುಮಧುರ ನೆನಪುಗಳು !


ಅಟ್ಟ ಸೇರಿದ್ದ ಅಲ್ಲಾವುದ್ದಿನನ ದೀಪ

ಹಣತೆಗಳಿಗೆಲ್ಲ ಗಂಟೆ ಜಾಗಟೆಗಳ

ಸಂಭ್ರಮದ ಹಿಮ್ಮೇಳ

ಅಜ್ಜಿಕಾಲದ ಗಂಟುಮೂಟೆಯ ಹಳೆಯ

ನಾರು ಬೇರುಗಳಿಗೆಲ್ಲಾ ಕಷಾಯವಾಗುವ ಪುಣ್ಯಕಾಲ.


ಕಲಿತು ಮರೆತಿದ್ದ ಸ್ತೋತ್ರ ಮಂತ್ರಗಳು ನೂರಾರು

ವಾಟ್ಸಾಪಿನ ಬೋಧನೆ ಸಂಶೋಧನೆಗಳು-

ಓ ಅದೆಷ್ಟು ಉಪಯುಕ್ತ- ಬಲವಂತ

“ಹೊರಬೀಗದ" ಪರ್ವಕಾಲದಲ್ಲಿ ಕಾಲಕ್ಷೇಪದ

ಅನನ್ಯ ಸಾಧನ ನಿಕ್ಷೇಪ.


ಎಲ್ಲವನ್ನೂ ಎಲ್ಲರನ್ನೂ ನೆಟ್ಟಗಾಗಿಸಿ ಬಿಟ್ಟಿದ್ದೇನೆ

ಅಂತ ಅಹಂ ಇರಬಹುದು ನಿನಗೆ- ಹೇಳುತ್ತಿದ್ದೇನೆ

ಬುದ್ಧಿ ಕಲಿಸಿದೆ ಇವರಿಗೆ ಅಂತ ಬೀಗುತ್ತಾ

ಇಂದಲ್ಲ ನಾಳೆ ನೀನು ಹೊರಟು ಹೋಗುತ್ತಿ

ಕಾಲ ನಿಲ್ಲುವುದಿಲ್ಲ.  ಉಳಿದ ನಾವೆಲ್ಲ ನಿನಗೆ

ಬಲಿಯಾದವರಿಗೆ ಸುಂದರ ಸ್ಮಾರಕ ನಿರ್ಮಿಸಿ

ಅಮೃತಶಿಲೆಗಳ ಮೇಲೆ ಶೋಕಶಾಸನ ಬರೆಸಿ

ಅಶ್ರುಭರಿತ ಭಾಷಣಗಳ ದಿನಾಚರಣೆ ಮಾಡುತ್ತೇವೆ.

ಮತ್ತು

ಮೊದಲಿನಂತೆ ಆಗಿಬಿಡುತ್ತೇವೆ- ಬೀಗಮುಕ್ತ.

 ನಲಿಯುತ್ತೇವೆ ನಲಿಕಾಮುಕ್ತ

ಶುನಕ ಪುಚ್ಛದ ಹಾಗೆ ಎಗ್ಗಿಲ್ಲದೇ ಮತ್ತೆ.


ರಮೇಶ್ ಚಿಪಳೂಣಕರ್

- ramesh

13 Apr 2020, 07:42 pm
Download App from Playstore: