ಕಸದ ತೊಟ್ಟಿಯ ಹೆಣ್ಣು ಮಗು..
ಉಸಿರುಗಟ್ಟುತ್ತಿದೆ ಸುತ್ತಲಿನ
ದುರ್ವಾಸನೆಗೆ,
ಹೊತ್ತು ತಂದವರ್ಯರೋ
ನನ್ನ ಇಲ್ಲಿಗೆ.
ಬೆಳಕ ಕಾಣದ ಕಣ್ಣ ರೆಪ್ಪೆಗೆ
ಮುತ್ತಿರುವ ಇರುವೆಗಳ ಸಾಲು
ಮುದ್ದಿಸುತ್ತಿವೆಯೋ! ತಮ್ಮ ಹೊಟ್ಟೆ
ತುಂಬಿಸಿಕೊಳ್ಳುತ್ತಿವೆಯೋ
ತಿಳಿಯದಾದೆ ನಾನು.
ಅಮ್ಮನ ಸ್ಪರ್ಶವೊಂದೇ ಪರಿಚಯ
ನನಗೆ ಅವಳ ದನಿಯೇ ವಿಸ್ಮಯ ಕಿವಿಗೆ,
ಆದರೀಗ ನಾ ಕೇಳದಾದೆನು ಆ ಪ್ರೀತಿಯ
ಮಾತುಗಳನ್ನು!
ರುಧಿರ ತುಂಬಿದ ಗರ್ಭದಲ್ಲಿ
ತಂಪನೆರೆವ ತೊಟ್ಟಿಲಿತ್ತು ಕಣ್ಣ
ತೆರೆಯದಿದ್ದರೂನು ಮನಕೆ
ಲಾಲಿ ಹಾಡಿ ಮಲಗಿಸಿತ್ತು.
ಮುಳ್ಳಿನ ಹಾಸಿಗೆಯ ಮೇಲೆ
ಅಮ್ಮನ ಕೈ ಜಾರಿ ಬಿದ್ದಿರಬೇಕು ನಾನು,
ನೋವು ಕಾಣದ ನನಗೆ ಜೀವ
ಹೋಗುವಂತಿದೆ ಆದರೂ ಅಮ್ಮನ
ಮಡಿಲು ಕಾಣದಾದೇನು.
ಕಿವಿಯೊಡೆಯುವ ಸದ್ದು
ಯಾರೋ ನನ್ನ ಹಾಗೆ
ಕಳೆದುಹೋಗಿರಬೇಕು ಅಮ್ಮನಿಗಾಗಿ
ಅಳುತಿರಬೇಕು.
"ಹೂವಿನಂತ ಹೆಣ್ಣು ಮಗು
ಕಸದ ರಾಶಿಯಲ್ಲಿದೆ ಕ್ರಿಮಿ-ಕೀಟಗಳು
ಕಿತ್ತು ತಿನ್ನುತ್ತಿವೆ ಯಾರಾದರೂ
ಬನ್ನಿ" ಎಂದು.
ಹೆಣ್ಣು ಮಗು!?
ಕಸದ ರಾಶಿಗೆ ನನ್ನೆಸೆದ ಕೈಗಳು
ನಿನ್ನವೇನಾ ಅಮ್ಮ!
- ಚುಕ್ಕಿ
18 Apr 2020, 09:51 pm
Download App from Playstore: