ಹಾವು ಸಾಯಲಿಲ್ಲ..

ಹುತ್ತವ ಬಡಿದು ಬಡಿದು ಸುಸ್ತಾದೆ
ಹಾವು ಸಾಯಲಿಲ್ಲ,
ಕೋಲು ಮುರಿಯಲಿಲ್ಲ,
ಬೆವರು ಹರಿದರೂ,
ಮಳೆ ಸುರಿದರೂ
ನಾನೂ ಬಿಡಲಿಲ್ಲ,
ಹಾವೂ ನೋಡಲಿಲ್ಲ.

ಹುತ್ತದೊಳಗೆ ಅದೆಂತಹ ಹಾವಿವುದೊ
ಯಾರೂ ತಿಳಿದವರಿಲ್ಲ
ವಿಷ ನಾಗರವೋ,
ಬರಿ ಕೆರೆ ಹಾವೋ
ಬಡಿವವರಿಗೆ ಬೇಕಿಲ್ಲ!

ಹುತ್ತದೊಳಗೆ ಹಾವು ಇದ್ದಂತಿಲ್ಲ
ಅಡ್ಯಾಡಲು ಹೋಗಿರಬಹುದು
ಬಡಿವ ಕಾರ್ಯ ನಿಂತಿಲ್ಲ
ಬಿಟ್ಟರೆ ಬಂದು ಕಡಿಬಹುದು!

ಯಾಕೆ ಬಡಿಯಬೇಕೆಂದು
ನನಗಂತೂ ಗೊತ್ತಿಲ್ಲ
ನಮ್ಮಪ್ಪ ಬಡಿತಿದ್ದ, ನನಗೂ ಕಲಿಸಿದ್ದ.
ಅವ ಬಡಿದು ಬಡಿದು ಸತ್ತೋದ
ಹಾವು ಸಾಯಲಿಲ್ಲ,
ನಾನೂ ಬಿಡುತ್ತಿಲ್ಲ.

- ಶ್ರೀಗೋ.

18 Jun 2016, 08:51 am
Download App from Playstore: