ಬಾಲಕಾರ್ಮಿಕೆ

ನನ್ನ ಜೀವನವೆಂಬ ಪಯಣ
ಹಾಸಿಗೆಯಿಂದೆದ್ದು- ಪ್ರಾರಂಭಿಸಿದರೆ
ರವಿ ಪಡುವಣದಲ್ಲಿ ಆಡುವವರೆಗೆ
ಸ್ನೇಹಿತರಾದ ಹಾರೆ - ಪಿಕ್ಕಾಸುಗಳೊಂದಿಗೆ
ಅದೆಷ್ಟೋ ವರ್ಷಗಳ ಸರಿಸಿ ಬಿಟ್ಟೆ


ಜೀವನದ ದಡದಿ ಬಡಿದಪ್ಪಳಿಸಿದ ಏರಿಳಿತಗಳ ಗಣಿಸದೆ
ಹತಾಷೆಗೊಂಡು ಮರುಗದೆ
ಜೀವನವನ್ನೇ ಜನಕಲ್ಯಾಣಕ್ಕೆ ಸಮರ್ಪಿಸಿ
ಸುಂದರ ಸ್ವರ್ಗವ ಕನಸು ಕಂಡೆ


ಬಿಸಿಲ ಬೇಗೆಯಲ್ಲಿ ಬೆಂದುಬೆಂಡಾಗಿ ಬಾಸುಂಡೆಯೆದ್ದ ಬೆನ್ನು
ಒಂಟೆ ಗೂನಿನಂತಾದರೂ
ಅದರಲ್ಲೇ ಮುಂದುವರಿಯಲು
ಹೊಟ್ಟೆಯೂ ಪ್ರೇರಣೆಯಾಗಿತ್ತು


ಕೈ - ಕಾಲುಗಳ ಜಜ್ಜಿಕೊಂಡ ದಿನಗಳು
ಕಲ್ಲು- ಬಂಡೆಗಳೊಂದಿಗೆ ಮುನಿಸಿಕೊಂಡಿದ್ದರೂ
ರಾತ್ರಿ ನಿದ್ದೆ ಹತ್ತದೆ ಪರದಾಡಿದ್ದರೂ
ಮರುದಿನ ಪ್ರೀತಿಯ ನಟನೆ ಅನಿವಾರ್ಯವಾಗಿತ್ತು...


ಧನಿಯ ಕೊರಳಲ್ಲಿ ನೇತಾಡುವ
ಇಣುಕಿ ನೋಡುವ ಮುತ್ತುಗಳು
ಸ್ವರ್ಣಾಭರಣ ಮಳಿಗೆಯಿಂದ ಕೊಂಡಿದ್ದರೂ
ಅವು ಮುತ್ತು- ರತ್ನಗಳಾಗಿರಲಿಲ್ಲ
ಹೊರತು ನನ್ನ ಬೆವರ ಹನಿಗಳಾಗಿತ್ತು...


ಹರಿದ ಬಟ್ಟೆಗಳ ಸುತ್ತಿ
ನನ್ನ ನಿತ್ಯ ಪಯಣ
ದೇಶದ ಏಳಿಗೆಗಿರುವ
ನನ್ನ ಅಳಿಲು ಸೇವೆಯಾಗಿತ್ತು...


ವರ್ಷಗಳ ನಂತರ
ಹಿಂತಿರುಗಿ ನೋಡಿದಾಗ
ಇನ್ನಷ್ಟು ಕೆಲಸಗಳು
ಬಾಕಿ ಕಂಡಾಗ
ಬಟ್ಟೆಯಂತೆ ಚಿಂದಿಯಾದ ದೇಹ
ದಣಿವ ಬೇಡುತ್ತಿತ್ತು.....

- ಶಾಹಿದ್ ಉಪ್ಪಿನಂಗಡಿ

24 Jun 2016, 09:28 am
Download App from Playstore: