ಮನದಾಳದ ನೋವು ಮುಚ್ಚಿ

ನಕ್ಕುಬಿಡು ಅಕ್ಕಯ್ಯ ಚಿಕ್ಕ ನಾ ಕೇಳುವೆ
ನನ್ನಕ್ಕ ನನ್ತಂಗಿ ನಮ್ಮಣ್ಣರು ನಗುವರು
ಸುಸ್ತಾದ ಕೈಗಳಲ್ಲಿ ಸೈಕಲ್ ಹಿಡಿದು
ಮತ್ತೆತ್ತ ಪಯಣ ತಾಯೆ ನಕ್ಕು ಬಿಡಮ್ಮ //

ಅಪ್ಪ ಕೂಡಿಡಲಿಲ್ಲ ಅಮ್ಮನು ಉಳಿಸಿಲ್ಲ
ಒಂದೊತ್ತಿನ ತುತ್ತಿಗಾಗಿ ಪರದಾಡುತ
ಬದುಕನ್ನು ತಲೆಮೇಲೆ ಹೊತ್ತು ತಿರುಗುತ
ಒಡಲಾಳದ ನೋವು ಮರೆತು ನಕ್ಕುಬಿಡು //

ಹಾದಿ ಗುಂಟೆಲ್ಲ ಹರಿದಾಡ್ವ ಮುಳ್ಳುಗಳು
ಹಾಲ್ಗೆನ್ನೆ ಹಿಮ್ಮಡಕೆ ಚುಚ್ಚಿದನ ಮರೆತು
ಬೀದಿನಾಯಿಗಳು ಬೋಗಳುವುದ ಸಹಿಸಿ
ಮನಬಿಚ್ಚಿ ಒಮ್ಮೆ ನಕ್ಕು ಬಿಡು ನನ್ನಕ್ಕ //

ಅಕ್ಕರೆಯಿಂದಲಿ ಮುದ್ದು ಮಕ್ಕಳು ಎಲ್ಲ
ನಿನ್ನ ನೋವನು ಕಂಡು ಕೊರಗುತಲಿಹವು
ಸಕ್ಕರೆಯ ಮಾತ್ನಾಡಿ ಮುದ್ದಿಕ್ಕುತಾ ತಾಯೆ
ನಕ್ಕು ಬಿಡು ಅಕ್ಕಾ ನೀನೊಮ್ಮೆ ನಕ್ಕುಬಿಡು //

ಸಣ್ಣವ್ವನು ನುಡಿದ ಕಹಿಮಾತು ಕಡೆಗಣಿಸಿ
ಸುಣ್ಣದ ಕಲ್ಮೇಲೆ ಒಮ್ಮೆ ತಣ್ಣೀರು ಬಿದ್ದಾಗ
ಮಲ್ಲಿಗೆಯ ಹೂವುಗಳು ಅರಳಿ ನಗುವಂತೆ
ಚಿಕ್ಕ ನಾ ಕೇಳುವೆ ಅಕ್ಕಯ್ಯ ನಕ್ಕುಬಿಡು //


ಕಲ್ಮೇಶ ಬಡಿಗೇರ
9743539657
.......ಬಾದಾಮಿ........

- Kalmesh Badiger

05 Oct 2020, 07:49 pm
Download App from Playstore: