ಕಲೆಗಾರ ದೇವರು

ಗೊಂಬೆ ಆಡಿಸುವವನು ನಾಟಕಕಾರ
ಹಾಸ್ಯ ಮಾಡುವವನು ಹಾಸ್ಯಗಾರ
ಚಿತ್ರ ಬಿಡಿಸುವವನು ಕಲೆಗಾರ
ಮೋಸ ಮಾಡುವವನು ಮೋಸಗಾರ

ಮಣ್ಣು ಮರದ ಕಲ್ಲಿನ ಗೊಂಬೆಗೆ
ಮಂತ್ರ ಪಠಿಸಿ ಪೂಜಿಸಿ ಆರಾಧಿಸಿ
ಹಬ್ಬ ಮಾಡಿದರೆ ಒಲಿದು
ಬರುವನು ಬಯಲಿಗೆ ದೇವರು
ಇವನು ಎಂತಹ
ಜಾದೂಗಾರ ನಾಟಕಕಾರ

ಕುಪ್ಪಳಿಸಿ ಹಾರುವ
ಜಿಗಿ ಜಿಗಿದು ಓಡುವ
ಕಪ್ಪೆ ಹಾವು ಇಲಿ ಹೆಗ್ಗಣ
ಕಾಗೆ ಗೂಬೆ ನವಿಲು
ಕತ್ತೆ ಕುದುರೆ ಹಂದಿ ಎಮ್ಮೆ
ನಾಯಿ ದನದ ಮೇಲೆ
ಸವಾರಿ ಮಾಡುವವನು
ಸೋಜಿಗದ ಹಾಸ್ಯಗಾರ

ಒಂದೇ ತಲೆಗೆ
ಹತ್ತಾರು ಕೈಗಳ ಕಟ್ಟಿ
ಝಳ ಝಳ ಝಳಪಿಸುವ
ಖಡ್ಗ ಮಚ್ಚು ಕೊಡ್ಲಿ ಬಾಣ
ಹಾರೆ ಗುದ್ದಲಿ ಹಿಡಿದು
ದುಷ್ಟರ ಸಂಹಾರಿಸುವ
ಇವನ್ನೊಬ್ಬ ಕೊಲೆಗಾರ
ಚಿತ್ರ ವಿಚಿತ್ರವಾದ ಕಲೆಗಾರ

ಹೇಳಿದ್ದು ಕೇಳೋದಿಲ್ಲ
ಕೇಳಿದ್ದು ಕೊಡೋದಿಲ್ಲ
ಬಿದ್ದು ಬೇಡಿದರು ಬರುವುದಿಲ್ಲ
ನಂಬಿ ಕೆಟ್ಟರು ನಂಬಿ ಮೋಸ
ಹೋದರು ನನ್ನ ಮುಗ್ದ ಜನಗಳು
ಮೋಜಿಗಾದ ಮೋಸಗಾರ

- ರಾಜು ಹಾಸನ

04 Nov 2020, 08:58 pm
Download App from Playstore: