ನಾ...!!

ಸದ್ದುಗದ್ದಲದೊಳಗಿನ ಶಾಂತಿ ;
ಶಬ್ಧದಲ್ಲಿನ ನೀರವ ನಿಶ್ಶಬ್ಧತೆ ;
ಮಾತಿನ ಮನೆಯ ಸೂತಕ ;
ಪದಗಳೆರಡರ ನಡುವಿನಂತರ ;
ಸಂತೆಯೊಳಗಣ ಸಂತ ;

ಸಾರಾಯಿ ಬಾರಿನ
ಗಲ್ಲಾಪೆಟ್ಟಿಗೆಯ ಮೇಲೆ
ಕೂತು ನಗುವ ಹಸನ್ಮುಖಿ ಬುದ್ಧ (ಲಾಫಿಂಗ್ ಬುದ್ಧ);
ಪಾಪದ ಮನೆಯಲ್ಲಿ ಭಕ್ತಿಯಿಂದ
ಆರಾಧಿಸಲ್ಪಡುವ ಭಗವಂತನ ಚಿತ್ರ ;

ಅಗ್ನಿ ಸ್ಪರ್ಶನೀಡಿ 
ಸುಟ್ಟು ಬೂದಿಯಾಗಿಸಿದರೂ
ಸುಗಂಧ ಬೀರುವ ಊದಿನ ಕಡ್ಡಿಯ ಹೊಗೆ ; 
ಮುಚ್ಚಿಟ್ಟರೂ  ಪರಿಮಳಸೂಸುವ  ಮಲ್ಲಿಗೆ ಮಾಲೆ ; 

ಸಂಗೀತಾಲಾಪನೆಯ
ಹಿಂದಿನ ಮೌನರಾಗ ; 
ತಂಬೂರಿತಂತಿಮೀಟಿ
ಮಾಧುರ್ಯಹೊಮ್ಮಿಸುವ
ಬೆರಳುತುದಿಯ ಹಿತಸ್ಪರ್ಶ ; 

ಭೋರ್ಗರೆಯುವ ಜಲಪಾತದಡಿ
ಜಡವಾಗಿ ಮಲಗಿರೋ ಬೋರುಗಲ್ಲು ;
ಯಾರು ತುಳಿದರೂ  ತಕರಾರಿಲ್ಲದೆ
ಕೊನರಲು ಕಾತರಿಸುವ  ಗರಿಕೆಹುಲ್ಲು ;

ಅದೃಶ್ಯ ಸತ್ಯಗಳ ಕಾವ್ಯದರ್ಪಣ ನಾ... !! 

- ashfaq peerzade

14 Jul 2016, 08:53 pm
Download App from Playstore: