ನೆನಪು ಮಾತ್ರ...

ಕಟ್ಲು ಮೇಲೆ ಕುಂತು ಕಾಫಿ ಕುಡಿವ ಅಪ್ಪ
ಕುಡುಗೋಲು ಹಿಡಿದು ಹಸಿಹುಲ್ಲು ಕೊಯ್ವ ಅವ್ವ
ಜಾರುವ ಪೇರಳೆ ಮರ ಹತ್ತಿ ಹಣ್ಣು ಕಿತ್ತು
ತಮ್ಮಗೆ ಕೊಡುವ ಅಣ್ಣ
ಎಲ್ಲಾ ನೆನಪು ಮಾತ್ರ ||

ಸುರಿವ ಮಳೆಯಲಿ ಹೂಟೀ ಹೊಡೆವ ಅಪ್ಪ
ಕಳಲೆ ಹೆಚ್ಚಿ ಸಾರು, ಪಲ್ಯ ಮಾಡುವ ಅವ್ವ
ಹೊಳೆ ಗೋರಿ ಹತ್ ಮೀನ್ ಹಿಡಿದು
ಹೊತ್ತು ತರೊ ಅಣ್ಣ
ಎಲ್ಲಾ ನೆನಪು ಮಾತ್ರ ||

ಉತ್ತು ಬಿತ್ತು ಕಣಜ ಕಟ್ಟಿ ತುತ್ತು ಕೊಡೋ ಅಪ್ಪ
ಹೊತ್ತು ಗೊತ್ತಿಲ್ಲದೆ ಹೊಗೆಯಲಿ ಸತ್ತು ಪ್ರೀತಿಯ ಕೂಳು ಬಡಿಸೊ ಅವ್ವ
ಎತ್ತಿಕೊಂಡು, ಹೊತ್ತುಕೊಂಡು ಪೇಟೆ ಸುತ್ತಿಸಿ
ಐಸ್ ಕ್ಯಾಂಡಿ ಚಾಕ್ಲೆಟ್ ಕೊಡಿಸಿ ನಗಿಸಿದ ಅಣ್ಣ
ಎಲ್ಲಾ ನೆನಪು ಮಾತ್ರ ||

- ಶ್ರೀಗೋ.

17 Jul 2016, 05:33 pm
Download App from Playstore: