ಪ್ರೇಮಯಾನ

ಪಿಸುನುಡಿಯನಾಲಿಸಲು ಮನ ಬಯಸುವುದು ಸಹಜ
ಒಲವೆಂಬ ಕುಡಿನೋಟ ಸೆಳೆದ ಬಳಿಕ
ಹೊಸತನದ ಭಾವಗಳು ಗರಿಗೆದರಿ ಹಾರುತಿರೆ
ಪ್ರೀತಿ ಪ್ರೇಮದ ಸವಿಯನುಣಲು ತವಕ
ಬಿಸಿ ಉಸಿರ ಪರುಶದಲಿ ಹಾಯಾಗಿ ನಿದಿರಿಸಲು
ಕಾತರದಿ ಹೃದಯಗಳು ಕಾಯುತಿಹುದು
ಒಸಗೆಯೊಂದಿಗೆ ಬೆಸೆದ ಭಾವ ಬಂಧಗಳೆಲ್ಲ
ಭದ್ರತೆಯ ನೆಲೆಯಲ್ಲಿ ನಗುತಿರುವುದು

ಎದೆಯ ಬಡಿತದ ಸದ್ದು ಕಿವಿಯ ತಮಟೆಯ ಸೇರಿ
ನವ್ಯ ಸಂಚಲನವನು ಹುಟ್ಟಿಸಿಹುದು
ಬದುಕೆಂಬ ಪುಟದಲ್ಲಿ ಗೀಚಿದಕ್ಷರವೆಲ್ಲ
ಹಾಡಾಗುತಲಿ ಹೊರಗೆ ಹೊಮ್ಮುತಿಹುದು
ಬದಗು ಇಲ್ಲದ ಪ್ರಣಯ ಪಕ್ಷಿಗಳ ಸಹಯಾನ
ಮುಂದಕ್ಕೆ ಮುಂದಕ್ಕೆ ಸಾಗುತಿಹುದು
ಬದಲಿಸಲು ಸಾಧ್ಯವಿಲ್ಲದ ಹಾಗೆ ಸಂಬಂಧ
ತಳವೂರಿ ಬಲುಗಟ್ಟಿಯಾಗಿರುವುದು

ಮುನಿಸು ಇಲ್ಲದ ಪಯಣ ಚಿತ್ತಗಳ ಸಮ್ಮಿಲನ
ಆಸೆ ಆಕಾಂಕ್ಷೆಗಳು ಹೆಚ್ಚುತಿಹುದು
ನನಸಾಗುವಾಸೆಗಳ ನೆನೆದು ನೂತನ ಜೋಡಿ
ಹಸಿವು ನಿದಿರೆಗಳನ್ನು ಮರೆಯುತಿಹುದು
ಅನುರಾಗದೊಡನಾಟ ಬಹುಕಾಲವಿರಲೆಂದು
ದೇವರಲಿ ಬೇಡಿಕೆಯು ಸಲ್ಲುತಿಹುದು
ದಿನನಿತ್ಯ ಕಾದಾಟವಿರದಂಥ ಅನುಬಂಧ
ಕೊನೆಯವರೆಗೂ ಮುಂದುವರೆಯಲೆಂದು

✍️ಲತಾ ಆಚಾರ್ಯ ಬನಾರಿ

- latha banary

09 Sep 2022, 12:41 pm
Download App from Playstore: