ರೈಲೊಂದು ಓಡುತ್ತಿದೆ
ರೈಲೊಂದು ಓಡುತ್ತಿದೆ
ಹಳಿಯ ಮೇಲೆಯೇ ಅದು ಓಡುತ್ತಿದೆ ಅಂತ
ಅದರೊಳಗಿದ್ದವರು ಅಂದುಕೊಂಡಿದ್ದಾರೆ.
ಯಾಕೆಂದರೆ..
ಎಸಿ ಬೋಗಿಯಲಿ ಕುಂತವರಿಗೆ
ಕುಲುಕಾಟದ ಅರಿವಿಲ್ಲ,
ಎರಡನೇ ದರ್ಜೆಯಲಿ ಕುಂತವರಿಗೆ
ಕುಲುಕಾಟ ಹೊಸದಲ್ಲ!
ಎಸಿ ಬೋಗಿಯವರಿಗೆ
ಏನುಂಟು ಏನಿಲ್ಲ ?
ಬೇಕಾದ್ದು, ಬೇಡದ್ದು
ತಿಂದು ತೇಗಿದರೂ ತೀರದ್ದು
ಮಕ್ಕಳು ಮರಿಗೂ
ಮೊಮ್ಮಕ್ಕಳ ಸಂತಾನಕ್ಕೂ ಕರಗದ್ದು !
ಎರಡನೇ ದರ್ಜೆಯವರಿಗೆ
ಒಂದುಂಟು ಒಂದಿಲ್ಲ,
ಕಾಲಿಗೆಳೆದರೆ ತಲೆಗಿಲ್ಲ,
ತಲೆಗೆಳೆದರೆ ಕಾಲಿಗಿಲ್ಲ,
ಕೆಲವರಿಗಂತೂ ಕಾಲು
ಚಾಚಲು ಚಾಪೆಯೇ ಇಲ್ಲ
"ಚಾಪೆ ಇದ್ದಷ್ಟೇ ಕಾಲು ಚಾಚು"
ಎಂಬ ಎಸಿ ಬೋಗಿಯವರ ಉಪನ್ಯಾಸ ನಿಂತಿಲ್ಲ.
ಎಸಿ ಬೋಗಿಯವರಿಗೆ,
ಹೊರ ಗಾಳಿಯ ಹಂಗಿಲ್ಲ
ಬಿಸಿಲ್ಗಾಳಿಯ ಸುಳಿವಿಲ್ಲ
ತಂಗಾಳಿಯ ಅರಿವಿಲ್ಲ
ಒಬ್ಬರ ಉಸಿರ ವಿಷ ಮತ್ತೊಬ್ಬರು ಕುಡಿಯುತ್ತ
ವಿಷಜಂತುಗಳಂತೆ ಬದುಕುತ್ತಿಹರೆಲ್ಲ..
ಎರಡನೇ ದರ್ಜೆಯವರಿಗೆ,
ಸುಡುವ ಬಿಸಿಲುಂಟು,
ತೊಯ್ಸುವ ಮಳೆಯುಂಟು
ಆದರೂ ಬಡತನಕೂ ಇವರಿಗೂ ಬಾರೀ ನಂಟು
ಎಸಿ ಬೋಗಿಯೊಳಗೆ
ಎರಡನೇ ದರ್ಜೇಯವರಿಗೆ ಅವಕಾಶವಿಲ್ಲ
ತಲೆ ಹೊಡೆದು ಮೇಲೆ ಬಂದ ಎಸಿ ಜನರೂ
ಹೇಳುತ್ತಿದ್ದಾರೆ.. "ಕಷ್ಟ ಪಟ್ಟು ಮೇಲೆ ಬನ್ನಿ"
ಕಷ್ಟ ಪಟ್ಟು ಮೇಲೆ ಬಂದ ಒಂದಿಬ್ಬರಿಗೆ
ಎರಡನೇ ದರ್ಜೆಯ ನೆನಪಿಲ್ಲ,
ಏಕೆಂದರೆ ಎಸಿ ಗಾಳಿ
ಮರೆಸುವುದು ಹಳೆಯದನೆಲ್ಲ.
"ಕಷ್ಟ ಪಟ್ಟರೆ ಕೈಲಾಸ"
ಇದು ಎಸಿ ಬೋಗಿಯವರ ಉವಾಚ
ನಿಲ್ಲಲೂ ಕಷ್ಟವಿರುವ
ಎರಡನೇ ದರ್ಜೆಯಲಿ
ಕಷ್ಟಗಳಿಗಿಲ್ಲ ಕಿಂಚಿತ್ತೂ ಸಂಕೋಚ !
- ಶ್ರೀಗೋ.
13 Aug 2016, 10:31 am
Download App from Playstore: