ಗೋಡೆಯ ಹಿಂದೆ
ಗೋಡೆಯ ಹಿಂದೆ ನಾನು ಕುಳಿತಿರುವೆ
ನನ್ನ ನೋವನ್ನು ನುಂಗುತ ಅಂತರ್ಯವನ್ನು ಮರಿಮಾಚುತ ಕುಳಿತಿರುವೆ
ಅಂತರಾವಲೋಕನ ಮಾಡಲು ಪ್ರಯತ್ನಿಸಿರುವೆ
ಗೋಡೆಯ ರಚನೆಯನ್ನು ನೋಡುತ್ತಾ ಕುಳಿತಿರುವೆ
ನನ್ನ ರಚನೆಯನ್ನೇ ಮರೆಯುತ
ನನ್ನ ಕಹಿಯನ್ನು ಕೈ ಬಿಡಲು ಪ್ರಯತ್ನಿಸಿರುವೆ
ಧೂಳು ಮಿಶ್ರಿತ ಖಾಲಿ ಕೋಟೆಯಲ್ಲಿ ಕುಳಿತಿರುವೆ
ನನ್ನ ಉಸಿರಾ ಗಾಡಿಯನ್ನೇ ಮರೆತಿರುವೆ
ನನ್ನ ಕೆಟ್ಟ ಉಸಿರನ್ನು ಮರೆಯಲು ಪ್ರಯತ್ನಿಸಿರುವೆ ಮರೆಯಲು ಪ್ರಯತ್ನಿಸಿರುವೆ
ಕಿಟಕಿಯ ಹೊರಗೆ ಬದುಕುವ ಬಯಕೆಯೊಂದಿಗೆ ನೋಡುತ್ತಿರುವೆ
ನನ್ನ ಬಾಳ ಬಯಕೆಯನ್ನೇ ಅದುಮಿರುವೆ
ನನ್ನ ಕ್ಷಮಾಪಣೆಯನ್ನು ಎದುರು ನೋಡುತ್ತಾ ಕುಳಿತಿರುವೆ
ಜಗತ್ತಿನ ನಿಜ ಬಣ್ಣವನ್ನು ಒಳಗಿನಿಂದಲೇ ನೋಡುತ್ತಾ ಕುಳಿತಿರುವೆ
ನನ್ನ ಕಹಿ ಬಣ್ಣವನ್ನೇ ಮರೆತಿರುವೆ
ನಿರ್ಲಕ್ಷತನದ ಕಂದಕವನ್ನು ಮುಚ್ಚಲು ಪ್ರಯತ್ನಿಸಿರುವೆ
ಕೊಳಕು ತುಂಬಿದ ಮನಗಳನ್ನು ನೋಡುತ್ತಿರುವೆ
ನನ್ನ ಮನದ ಕೊಳಕನ್ನೇ ಮರೆತಿರುವೆ
ಸುಭ್ರತೆಯನ್ನು ಸುಣ್ಣದ ಗೋಡೆಯಲ್ಲಿ ಕಾಣಲು ಪ್ರಯತ್ನಿಸಿರುವೆ
ಜಗತ್ತಿನ ಬೆಳಕನ್ನು ಒಳಗಿನಿಂದಲೇ ನೋಡುತ್ತಾ ಕುಳಿತಿರುವೆ
ನನ್ನ ಅಂಧಕಾರವನ್ನೇ ಮರೆತಿರುವೆ
ಹೃದಯದ ಕತ್ತಲೆಯನ್ನು ಹೋಗಲಾಡಿಸಲು ಪ್ರಯತ್ನಿಸಿರುವೆ
ಜಗತ್ತಿನ ಸ್ವಾತಂತ್ರ್ಯವನ್ನು ಒಳಗಿನಿಂದಲೇ ನೋಡುತ್ತಿರುವೆ
ನನ್ನ ಸ್ವಾತಂತ್ರ್ಯವನ್ನೇ ಮರೆತಿರುವೆ
ಬಿಡುಗಡೆಯ ಪಕ್ಷಿಯಾಗಿ ಹಾರಲು ಕಾಯುತ್ತಿರುವೆ
ಲೋಕದ ನಿಜ ಮುಖವಾಡವನ್ನು ಒಳಗಿನಿಂದಲೇ ನೋಡುತ್ತಿರುವೆ
ನನ್ನ ಮುಖವನ್ನೇ ಮರೆತಿರುವೆ
ನೈಜ ಮುಖದ ವ್ಯಕ್ತಿಯಾಗಲು ಪ್ರಯತ್ನಿಸಿರುವೆ
ನಿಜ ಸಂಬಂಧಗಳನ್ನು ಒಳಗಿನಿಂದಲೇ ನೋಡುತ್ತಿರುವೆ
ನನ್ನ ಸಂಬಂಧವನ್ನೇ ಮರೆತಿರುವೆ
ಹೊಸ ಅನುಭವದ ವ್ಯಕ್ತಿಯಾಗಲು ಪ್ರಯತ್ನಿಸಿರುವೆ
-ಕಾವ್ಯಪ್ರಿಯ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
30 Sep 2024, 09:27 am
Download App from Playstore: