ಈ ನಾಡ ಒಮ್ಮೆ ನೋಡು
ಚಂದನದಲಿ ಹೊಂಬೆಳಕಲಿ
ಕಸ್ತೂರಿಯ ಕಂಪನದಲಿ
ಒಮ್ಮೇ ತಿರುಗಿ ನೋಡು
ನೀನೊಮ್ಮೆ ತಿರುಗಿ ನೋಡು!!
ಮಾಮರದಲಿ ಮೈ ಮರೆಯುವ
ಕೋಗಿಲೆಗಳ ಆ ಗುಂಪಲಿ
ಒಮ್ಮೇ ಸೇರಿ ನೋಡು
ನೀನೊಮ್ಮೆ ಸೇರಿ ನೋಡು!!
ಬೇಲೂರಿನ ಆ ಶಿಲೆಗಳ
ಕೋಲಾರದ ಹೊನ್ ಸಿರಿಗಳ
ಒಮ್ಮೇ ಕಲೆತು ನೋಡು
ನೀನೊಮ್ಮೆ ಕಲೆತು ನೋಡು!!
ಅಬ್ಬರಿಸುವ ಸಾಗರವಿದೆ
ಹುಬ್ಬೇರಿಸೊ ಆ ತೀರದಿ
ಒಮ್ಮೇ ಸಾಗಿ ನೋಡು
ನೀನೊಮ್ಮೆ ಸಾಗಿ ನೋಡು!!
ಈ ನಾಡಿನ ಈ ನುಡಿಗಳ
ಆಹ್ಲಾದಿಸುವ ಒಲುಮೆಯ
ಒಮ್ಮೇ ಕೇಳಿ ನೋಡು
ನೀನೊಮ್ಮೆ ಕೇಳಿ ನೋಡು!!
ನಿಸ್ವಾರ್ಥದ ಅಮೃತದಲಿ
ಸತ್ಯಾರ್ಥದ ಸಂಜೀವಿನಿ
ಒಮ್ಮೇ ಆಗಿ ನೋಡು
ನೀನೊಮ್ಮೆ ಆಗಿ ನೋಡು!!
- ಪಿ.ಜಿ.ಜ್ಯೋತಿ
21 Aug 2016, 11:02 am
Download App from Playstore: