ಮಹಾನಗರದ ಮರಗಳು ನಾವು
ಮಹಾನಗರದ ಮರಗಳು ನಾವು
ಮೈ ಹರವಿ ನೆರಳಾಗುವೆವು
ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ
ಗಾಳಿ ಮಳೆಗೆ
ಆವ ಜನ್ಮದ ಪಾಪ
ತಟ್ಟಿಹುದೋ ಎಮಗೆ ?
ಎಲ್ಲರೂ ವೈರಿಗಳು
ಈ ಮಹಾನಗರದೊಳಗೆ
ವಸಂತಕ್ಕೆ ಮೈದಳೆದರೆ...
ಕೊಂಚ ಮೈ ಕೊಡವಿ ಚಿಗಿತರೆ
ಕೆ.ಇ.ಬಿ.ಯವರ ಕಟಾವು
ಕಿಂಚಿತ್ ಒಣಗಿದರೆ ಕೊಂಬೆ
ಪಾಲಿಕೆಯವರ ಕೊಡಲಿ
ನಾ ಹೇಗೆ ನೆರಳ ಕೊಡಲಿ ?
ರಸ್ತೆ ಅಗಲೀಕರಣ,
ಫುಟ್ಪಾತ್ ನವೀಕರಣ
ಏನಿಲ್ಲದಿದ್ದರೂ ಯೋಧರ ವನ
ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ
ಕತ್ತರಿಸಿದರೂ ರೆಂಬೆ ಕೊಂಬೆಗಳ
ಮತ್ತೆ ಚಿಗಿತು ಜೀವನದಲಿ
ಹೋರಾಡೆಂಬ ಪಾಠ ಸಾರುವೆವು
ಬಿಸಿಲಿಗೆ ಬೇಯುವ ಜನಕೆ
ಬಿಡದೆ ನೆರಳಾಗುವೆವು.
- ಶ್ರೀಗೋ.
15 Oct 2014, 11:21 am
Download App from Playstore: