ರಾಮ ಬೇಡಮ್ಮ ಶ್ಯಾಮ ಬೇಡಮ್ಮ

ಈ ರಾಮ ಬೇಡಮ್ಮ ಶ್ಯಾಮ ಬೇಡಮ್ಮ
ರಾಜ್ಯ ಬೇಡಮ್ಮ ಪಟ್ಟದರೆಸಿಯಾದರೂ
ನಿಂದೆ ಕಟ್ಟುವ ಜನರು ಬೇಡಮ್ಮ!

ರಾಮ ದೇವರಾದರೆ ನಾನು ದೇವತೆಯಲ್ಲವೇ
ದೇವರ ಮೇಲಿರುವ ಭಕುತಿ ನಂಬಿಕೆ ನನ್ನಮೇಲಿಲ್ಲವೇ!
ಉಸಿರಿರದ ಸಂಸಾರದ ಭಾರ ಬೇಡಮ್ಮ
ಭಾವಗಳಿಗೆ ಬೆಲೆಯಿಲ್ಲದ ಬದುಕು ಬೇಡಮ್ಮ!

ಆಗಾಗ ನಡುಗುವೆನು
ಇರುಳು ಸರಿದು ಹೊತ್ತು ಹುಟ್ಟುವ
ಮುಂಜಾವಿನ ಮೌನದ ಸದ್ದಿಗೆ,
ರಾಮನಿರುವುದಿಲ್ಲ ಧೈರ್ಯ ಹೇಳಲು
ಮಗ್ಗುಲು ಬದಲಿಸಿ ತಡಕಾಡಿದಾಗ!

ತಪ್ಪು ಯಾರದಮ್ಮ ಎಂದು ಒಮ್ಮೆಯೂ
ಕೇಳಲಿಲ್ಲ ಪರಪಂಚ ನನ್ನನು, ದೋಷಿ
ನಾನಾದೆ ಮಾಡದ ತಪ್ಪುಗಳಿಗೆ ಹೆಣ್ಣಾದ ಮರುಗಳಿಗೆ!

ಉತ್ತರ ಕೊಡುವ ಗೋಜಿಗೂ ಹೋಗಲಿಲ್ಲ
ನಾನು, ಏಕೆಂದರೆ ತಪ್ಪು ಹೆಣ್ಣಿನದ್ದೇ ಅಲ್ಲವೇ
ಅವರು ಬರೆದುಕೊಂಡ ನೀತಿ ಪುಟಗಳಲ್ಲಿ ಹೆಣ್ಣಿಗೆ ಜಾಗವಿಲ್ಲವೇ!

ಮಡಿಲ ಮಗುವಾಗುವೆ ತಪ್ಪಿಯೂ ನನ್ನ
ಕೈ ಬಿಡದಿರು ನೀನು ಮತ್ತೆ ನನ್ನ ಕದ್ದರೆ, ಯುದ್ಧವೊಂದು ನಡೆದರೆ ಯಾವ ಕಾಡಿನ ಪಾಲಾದೇನೋ? ಕಂಡವರ ಬಾಯಲ್ಲಿ ಕರಗಿ ನೀರಾದೆನೋ? ಉತ್ತರವಿರದ ಪ್ರಶ್ನೆಗಳ ಸೊತ್ತಾದೆನೋ ನಾನು!

ನನ್ನೀ ನೆರಳಿಗೆ ಕರುಳ ನಂಟು ಬೆಸೆದುಬಿಡು ನಿನ್ನ ಹೃದಯಕ್ಕಂಟಿ ಉಸಿರಾಡುವೆ ಮತ್ತೆ ನಾನಾಗಿ ನನಗಾಗಿ..

- ಚುಕ್ಕಿ

16 Apr 2025, 10:01 pm
Download App from Playstore: