ಮುದ್ದಿನ ಮಡದಿ...

ಕವನ ಬರೆಯಲೆಂದು ಬರೆದೆ ಮುನ್ನುಡಿ,
ನೀ ನನ್ನ ಅಂತರಂಗದಾ ಕನ್ನಡಿ,

ನನಗೆ ನೀನು, ನಿನಗೆ ನಾನು,
ಜೊತೆಯಿರೆ ನೀನು, ಬೇಕು ಬೇರೇನು?

ನಿನ್ನ ಹುಸಿ ಕೋಪ ಚೆನ್ನ, ಕುಡಿ ನೋಟ ಚೆನ್ನ,
ನೀ ನನ್ನ ಬಾಳಲಿ ಬಂದಾಗಿನಿಂದ ಬೇಡವಾಗಿದೆ ಚಿನ್ನ,

ನಿನ್ನ ಮಾತದು ಇರಬಹುದು ಹರಿತ,
ಆ ಮಾತ ದ್ವನಿಯದು ಕೇಳಲು ಬಲು ಹಿತ,

ನಿನ್ನ ಸುಮಧುರ ಕಂಠ ಸಿರಿಯ ಮೃದುವಾದ ಮಾತುಗಳು,
ಕೇಳಲು ಬಲು ಇಂಪು ಮುಂಜಾನೆ ಬಿಸಿ ನೀರ ಕುಡಿಯುತ ಕುಳಿತಿರಲು,

ಇರಬೇಕು ಓದು ಒಕ್ಕಾಲು, ಬುದ್ದಿ ಮುಕ್ಕಾಲು,
ಮೀಸಲಿಡುವೆ ನಿನಗೆ, ಈ ನನ್ನ ಬಾಳ ಸಮ ಪಾಲು,

ಸಂಜೆ ಉದ್ಯಾನವನದಲಿ ಬೀಸುತಿರೆ ತಂಗಾಳಿ,
ನಮ್ಮ ಪಿಸು ಮಾತ ಕದ್ದಾಲಿಸುತಾವೆ ಹೂ ಬಳ್ಳಿ,

ನೀ ಊರಿಗೆ ಹೋದಾಗಿನ ನನ್ನ ಪಾಡು ನಾ ಹೇಗೆ ನಿನಗೆ ಹೇಳಲಿ?
ಸುಮ್ಮನೆ ಕುಳಿತಿರೆ ನಾ ಮನೆಯಲಿ,
ಮಾತನಾಡಿದೆ ನೀ ಮೊನ್ನೆ ಹಾಕಿದಾ ರಂಗೋಲಿ,
ಅದಕೆ ನಾ ಏನ ಉತ್ತರ ಹೇಳಲಿ?

ಏನೂ ಹೇಳಲಾರದೆ ನಾ ಓಡಿ ಬಂದು ರೈಲಿನಲಿ ಕುಳಿತೆ,
ನಿನ್ನ ನೆನೆನೆನೆದು ಬರೆಯುತಾ, ನಾ ಹಿಂದೆಂದೂ ಬರೆದಿರದ ಮಧುರ ಪ್ರೇಮ ಕವಿತೆ...
ಬರೆದಷ್ಟೂ ಸಾಗುತಿದೆ ಪದಗಳಾ ಎಣಿಕೆ...
ಕ್ಷಮಿಸುವೆಯಾ ನೀನು? ತಡಮಾಡಿದೆ ನಾನು, ಕೊಡಲು ಕವನದಾ ಕಾಣಿಕೆ,
ತಡಮಾಡಲಾರೆ ನಾ ಹೊದಿಸಲು ಒಲವಿನಾ ಹೊದಿಕೆ,
ಹೇಳು ನನಗೇಕೆ ಚಿಂತೆ, ಆದಮೇಲೆ ನೀನು ನನ್ನಾಕೆ,

ಇಡುವೆ ನಾನೀಗ ಅಲ್ಪ ವಿರಾಮ,
ವಿರಮಿಸದೇ ಸಾಗುತಿರಲಿ ಈ ನಮ್ಮ
ಮಧುರ ಪ್ರೇಮ...
--- tippu ---

- tippu

23 Jun 2026, 08:13 am
Download App from Playstore: