ನಾಡನುಡಿ ಕಲೆ

ಕಲೆಯಂ ನೇಯ್ದಿಹ ಶಿಲೆಯೊಳ್ ಚೇತನ /
ನೆಲೆಯಿದು ಸಾಹಿತ್ಯಾದಿಕಲೆ /
ನೆಲಜಲ ಮಲೆಗಳ ಶಿಲೆಗಳ ಕೆತ್ತನೆ /
ಛಲದೊಳ್ ಹೂವೊಲು ಸಕಲನೆಲೆ //

ಕಾನನ ಸುಂದರ ಹಸಿರಿನ ಮಂದಿರ /
ಕಾಣುವ ಪರ್ವತ ಸಾಲುಗಳು //
ಬಾನೆಡೆ ಚಿಮ್ಮುವ ತತ್ವದ ಸಾರವು /
ಭಾನುವೆ ಮೂಡಿಹ ಕವನಗಳು //

ಕಿಲಕಿಲ ಕಲರವ ಪಕ್ಷಿಗಳಿಂಚರ /
ಮಲೆನಾಡಿನಜಲ ಧಾರೆಗಳು //
ಫಲಗಳ ಬಹುಬಗೆ ಸವಿಯಲು ಸೊಗಸಿದೆ /
ಹಲವು ವಿಚಾರದ ಧಾರೆಗಳು //

ಕೀರುತಿ ಹಬ್ಬಿದೆ ನಾಡಿನ ದೇಶದ /
ದೂರಕೆ ಪಯಣಿಸಿ ನಮ್ಮತನ //
ಹಾರಿಸಿ ಭಾವುಟ ಸೇರಿಸಿ ಸಮರಸ /
ಪೇರಿಸಿ ಗುಣಗಳ ನಿಮ್ಮತನ //

ಕೃತಿಯೊಳ್ ಮತಿಯೊಳ್ ಸದ್ಗತಿ ತೋರುವ /
ಫಥದೊಳ್ ಭಾವದ ನಾಡೊಲುಮೆ //
ಶೃತಿಯೊಳ್ ಹಾಡುವ ಸ್ತುತಿಸುವ ಮಾತೆಯ /
ಯತಿಮುನಿ ಪೂಜಿಪ ನಮ್ಮೊಲುಮೆ //

ಕೆರಳಲು ಸಿಂಹವು ತರಿದುಂ ಬಡಿವನು /
ಕೊರಳನು ಕೊಡುವನು ರಕ್ಷಣೆಗೆ //
ತೆರಳಿರಿ ಪಾಪದ ಜನಗಳೆ ತೊರೆದುಂ /
ಮರುಕವ ತೋರೆನು ಭಕ್ಷಣೆಗೆ //

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ

- shivaprasad aradhya

22 Nov 2026, 07:41 am
Download App from Playstore: