ನಮ್ ಕೂಸು

ಎಷ್ಟು ಭಾರದ ದಾತನಿವ
ಅಷ್ಟು ಹಗುರ ಸಲೀಸು ಕೂಸುಕೊಂಡ,
ದೀರ್ಘ ಗರ್ಭವ ಸೀಳಿ ಬಂದ ಕೂಸದು ಹಡೆದವಗೆ ತೂಗದ ತೊಟ್ಟಿಲು ತೋರಿತು ಅಳುತಳುತ ಹಾಡಿದ ಲಾಲಿಯ ನಡುವೆ ಅನಂತಾಯುಷ್ಯ ಪಡೆಯಿತು ಆ ಕೂಸು!

ಸರದಿಯಲಿದ್ದವರೆಲ್ಲ ಹೆರುವವರೆ
ಉತ್ತಲಾಗದು ಬಿತ್ತಲಾಗದು ಕೊನೆಯ ನಿಟ್ಟುಸಿರಿನಲೆ ಇದರ ಹುಟ್ಟು ,ಬರಡು ಬಂಜೆ ಎಂಬ ಮಾತೇ ಇಲ್ಲ ಇದು ಸಮಯದ ಸಂತಾನ.

ಈ ಕೂಸಾಗದ ಮನೆಯೇ ಇಲ್ಲ
ಒಮ್ಮೊಮ್ಮೆ ಕುಲಾವಿಗೂ ಬರವಿಲ್ಲ
ಇದರ ಜನನಕೆ ನೆಲ,ಕುಲ,ಜಲದ ತಂಟೆ ಬೇಕಿಲ್ಲ, ಜನ ಜನರು ತಾವೀದ್ದರೆ ಸಾಕು ತಾನುದಿಸುವುದು ಉಸಿರು ತಿಂದು


ಅಳದ ಕೂಸಿದು ಅಳಿಸುವ ಕೂಸು
ಹಡೆವವರು ನಡೆವಲ್ಲಿ ಪರದೆ ಎಳೆದು ಆಟ ಮುಗಿಯಿತಿನ್ನು ಎಂದು ಕೊನೆ ತಿಳಿಸುವ ಮರಿಗೂಸು.
ತನ್ನಾದಿಯಲೆ ತನ್ನವರಂತ್ಯ ಕಾಣ್ವ ಇದಕೆ " ಸಾವು" ಎಂಬ ಹೆಸರಿಟ್ಟರೇನೆ ಲೇಸು.

- MaheshRK

14 Sep 2016, 11:09 pm
Download App from Playstore: