ನಮ್ಮನೆಯಂಗಳ
ಹಂಚು ಮಾತ್ರ ಪರಿಚಯವಿದ್ದ (ನಾನು)
ಅಂದೊಮ್ಮೆ ಹೊರಗಿಳಿದಿದ್ದೆ
ಹಸಿರು ಗೂಟಗಳ (ಮರ-ಗಿಡ) ಕಂಡು ಪ್ರಶ್ನಿಸಿದ್ದೆ
ಹಂಚಿನ ಬಣ್ಣದ ಊರು
ಕಣ್ಣಿಗೆ ಹಂಚಿನಷ್ಟೇ ತಂಪಾಗಿತ್ತು
ಅದರ ಸುತ್ತಿದ ಅಚ್ಚ-ಹಸುರು
ಬಟ್ರ ಹೋಟೆಲಿನ ಊಟದಂತಿತ್ತು
ಗಾಳಿ ಬೀಸಿ, ಹಾಡುತ್ತಾ
ನನ್ನ ನಿದ್ರಿಸುತ್ತಿದ್ದ
ಮಾವು, ತೆಂಗು
ನೇತ್ರದೊಂದಿಗೆ ಪರಿಚಯಭಾವ ತೋರುತ್ತಿತ್ತು.
ನೋಡಲು ಬಲು ಚಂದ
ಮಾತನಾಡಬೇಕೆನಿಸುತ್ತಿತ್ತು.
ಹೊರಗಿಳಿದ ನಾನು
ಹಾರಾಡಬೇಕು, ಕುಣಿದಾಡಬೇಕು
ನಡೆ(ಲಿ)ದಾಡಬೇಕೆಂದೆನಿಸಿದಾಗ
ತಾತೆ-ತಾತೆ ಎಂಬ ಧ್ವನಿ
ನನ್ನ ಸ್ವಾಗತಿಸುತ್ತಿತ್ತು
ಚಿಕ್ಕ ಚೆಂಡು, ಪುಟ್ಟ ಕಾರು
ಗಿಜಿ-ಗಿಜಿ ಬ್ಯಾಟು
ನನಗಿಂತ ಮುಂಚೆಯೇ
ಅಂಗಳ ತಲುಪುವವರು.
ಕುಟ್ಟಿ-ದೊಣ್ಣೆ, ಬ್ಯಾಟ್-ಬಾಲ್ ಆಡುವಷ್ಟಾಗುವಾಗ
ಅಂಗಳ ಪೂರ್ತಿ ವಿಕೆಟಿನದ್ದೇ ತೂತು...
(ದಣಿವಾದಾಗ ಮಾವಿನ ಮಡಿಲು
ಹಾಯಾಗಿಸುತ್ತಿತ್ತು)
ಪರ್ಯಾಯ ದ್ವೀಪದಂತೆ
ಸುತ್ತುವರಿದ ಮನೆ
ಅಂಗಳವ ತಡೆವ (ಕಿರಣಗಳಿಂದ)
ಕಾವಲುಗಾರನಾಗಿತ್ತು
ಗೋಳಿಯಾಟ, ತಂದೆ-ತಾಯಿಯಾಟ
ಅದರೊಂದಿಗೆ ಊಟ - (ಹೀಗಿರುವಾಗ)
ಅಡುಗೆ ಬಿಸಲಿಯೂ
ಅಂಗಳದಲ್ಲಿ ಮೂರು ಕಲ್ಲುಗಳ ಮೇಲಿತ್ತು.
ನೆಲಪೂಚೆಯ ಹುಡುಕುವ ಭರದಲ್ಲಿ
ಮೂಲೆಯಲ್ಲಿ ಕೂತ ಇಡುಸೂಡಿ
ಸೋಮಾಲಿಯನ್ನರಂತೆ ತೆಳ್ಳಗಾಗುತ್ತಿತ್ತು..
"ಹೇ ರಹೀಮ್" ಎಂದು ಕರೆಯುತ್ತಾ
ನೆರೆಯ ರಾಮನೂ -ಆಡಲೆಂದು
ಥೋಮಸ್'ನೊಂದಿಗೆ ಬರುವಾಗ
ವಾರಕ್ಕೊಮ್ಮೆ ತರುವ ಚಾಕಲೇಟು ಚೀಲ
ತೂತಾದ ಮಡಕೆಯಂತೆ ಅಂಗಳದಲ್ಲಿ ಎಸೆಯಲ್ಪಡುತ್ತಿತ್ತು.
ನಿದ್ದೆಗೆ ಮಾತ್ರ ಮೀಸಲಾದ ಮನೆ
ಊಟ, ಆಟ, ಮನೆಪಾಠ
ಎಲ್ಲದಕ್ಕೂ ವೇದಿಕೆಯಾಗಿದ್ದ ಅಂಗಳವು
ಅಜ್ಜಿಯಿಂದ ವರ್ಷಕ್ಕೆ 365
ದಿನಗಳೆಂಬ ಪಾಠ ಕಲಿಸಿತ್ತು...
ಇತೀ
ಶಾಹಿದ್, ಉಪ್ಪಿನಂಗಡಿ
- ಶಾಹಿದ್ ಉಪ್ಪಿನಂಗಡಿ
26 Oct 2016, 03:10 pm
Download App from Playstore: