ಒಂದು ಸಾವಿನ ಸುತ್ತ

ಮಹಜರು ಮಾಡಲು ಜನರ ಸಂತೆಯೆ ಬಂದಿದೆ,
ಅವರವರ ಬಾಯಲ್ಲಿ ಅವರಿಗೆ ತಿಳಿದಂತೆ
ಅಂತೆ ಕಂತೆ…
ಸತ್ತಿದ್ದು ಒಬ್ಬ - ಹುಟ್ಟಿ ಹಬ್ಬಿದ್ದು
ನೂರು ಕತೆ…

ಸಾವಿನ ನಂತರವೂ ಬದುಕಿಸಿಟ್ಟರು,
ನಿಂತರೂ ಉಸಿರು ಆಂಬೋಣಗಳಿಗೆ
ಕೊರತೆಯಿಲ್ಲ…
ನನಗೇಕೋ ಊರವರ ಮೇಲೆಲ್ಲ ಗುಮಾನಿ,
ಮಾತುಗಳಲ್ಲಿ - ಊಹೆಗಳಲ್ಲಿ
ಪದೇ ಪದೇ ಸಾಯಿಸಿದ್ದಾರೆ
ತಮಗೆ ಬೇಕಾದಂತೆಲ್ಲ…

ಮರಣೋತ್ತರ ಪರಿಕ್ಷೆಯಲ್ಲಿ
ಕಳೇಬರವ ಅಡ್ಡುದ್ದ ಕೊಯ್ದುದಕಿಂತ ಕ್ರೂರ
ಈ ಜನರ ಯೋಚನಾ ಲಹರಿ…
ಸತ್ತವನ ಆತ್ಮ ನಗುತ್ತಿತ್ತು,
ಕಂಡು ಜಗದ ಮುಖವಾಡಗಳ ಪರಿ…

- ಒಂಟಿತೋಳ

03 Nov 2016, 12:00 pm
Download App from Playstore: