ಜೋಡಿ ಗಿಣಿಗಳು
ಜೋಡಿ ಗಿಣಿಗಳು ಕೂಡಿ ನಲಿದವು
ಕಾಡ ಮರಗಳ ಸುತ್ತಿ ಅಲೆದವು!!
ಹೂವು ಹಣ್ಣಿನ ಸ್ವಾದ ಹೀರುತ
ಪ್ರಣಯದಾಟದಿ ಮೈಯ ಮರೆತವು!!
ಬೇಟೆಗಾರನ ಬೇಟೆ ಮೋಡಿಗೆ
ಕೊರಳ ನೀಡಿ ತಾ ಸಿಕ್ಕಿ ಬಿದ್ದವು!!
ಪ್ರಣಯ ಪಕ್ಷಿಗೆ ವಿರಹ ಉಣಿಸಲು
ಹೆಣೆದ ಬಲೆಯದು ಕುಣಿಕೆ ಮಾದರಿ!!
ಪಾರು ಮಾಡಲು ಯಾರು ಬಾರದೆ
ದಾರಿ ಕಾಣದೆ ನೊಂದು ಕುಳಿತವು!!
ಬೇಟೆಗಾರನ ಕೈಗೆ ಸಿಲುಕಿ
ಊರ ರಾಜಗೆ ಮಾರಿ ಹೋದವು!!
ಚಂದ ಗಿಣಿಗಳ ಬಂಧಿ ಮಾಡಲು
ರತ್ನ ಪಂಜರ ತಂದ ರಾಜನು!!
ಒಂದು ಮಾಡುವ ಮನಸು ಮಾಡದೆ
ಬಂಧಿ ಮಾಡಿದ ಮುದ್ದು ಗಿಣಿಗಳ!!
ತನ್ನ ಕೋಣೆಯ ದ್ವಾರದೆದುರಿಗೆ
ಇಟ್ಟ ಪಂಜರ ಎರಡು ಬದಿಯಲಿ!!
ಊರ ರಾಜನ ಮೋಜಿನಾಟಕೆ
ಎದಿರು ಬದಿರಲಿ ನೊಂದ ಗಿಣಿಗಳು!!
ನೊಂದ ಗಿಣಿಗಳ ಮೂಕ ವೇದನೆ
ಕಂಡು ಮರುಗುವ ಮನಸು ಬಾರದೆ!!
ಎದುರಿಗಿದ್ದು ವಿರಹ ಕಾಡುವ
ಶಾಪಕೆಂದು ಮುಕ್ತಿ ಮನುಜನೆ!!
- ಪಿ.ಜಿ.ಜ್ಯೋತಿ
06 Nov 2016, 08:39 pm
Download App from Playstore: