ನಾ

ನಾ ಬಂಜರೆಂದುಕೊಂಡ ಎದೆಯೊಳಗೆ
ಕೈತೋಟವಾದರೂ ಮಾಡಬಹುದಿತ್ತು…
ಅರ್ಥವಿಲ್ಲದ ಪದಗಳ ಪೊಣಿಸುತ್ತ ಕುಳಿತೆ
ವಿಚಾರವಾದಿಯಂತೆ ಬಣ್ಣ ಬಳಿದುಕೊಂಡು…

ಅವಳು ಇವಳೆಂದು ಕನಸು ಕಾಣಲು
ನಾನು ಪ್ರೇಮಕವಿಯಾಗಿ ಉಳಿದಿರಲಿಲ್ಲ,
ಮಾಯಾಮೃಗಮಾನಸಿಯೊಬ್ಬಳ ಬೆನ್ನು ಬೀಳಲು
ನಾನೊಬ್ಬ ನುರಿತ ಬೇಟೆಗಾರನೂ ಅಲ್ಲ…

ಕಾಲು ಹಾದಿಯಲಿ ಹಳೆಯದೊಂದು ಉಗ್ಗ ಹಿಡಿದು
ಹಾಲೋಯ್ಯುವ ಹುಡುಗ
ದಾರಿಯುದ್ದಕ್ಕೂ ಹಾಡು ಗುನುಗಿದಂತೆ ನಾನು…
ಮಣ್ಣಿಗೆ ಮುತ್ತಿಕ್ಕಿದ ಚಪ್ಪಲಿಗೆ ನೀರಡಿಕೆಯಾಗಿತ್ತು,
ನಳದ ಕೆಳಗೆ ತೊಯಿಸಿಬಿಟ್ಟೆ…
ತೊರೆಯೊಂದರ ಬಳಿ ಕಲ್ಲು ತೇಲಿಸಲು ಯತ್ನಿಸುವಾಗ
ಜೊತೆಗೂಡಲು ಯಾರೂ ಇರಲಿಲ್ಲ,
ಹುಚ್ಚುಹುಡುಗನ ಮೂರ್ಖತನ ಕಂಡು
ಝರಿಯ ನೀರು ಆಗಾಗ ಗೊಣಗುತ್ತಿತ್ತು…

ನಾ ಕಂಡ ಒರತೆಯ ಸೆಲೆಗೆ ಆಗಾಗ ಬೊಗಸೆವೊಡ್ಡಿ
ಮೀನುಗಳನೆಲ್ಲ ಹೌಹಾರಿಸಿದ್ದೆ,
ಖಾಲೀ ಮನದ ತುಂಬ ಮೌನದ ಚಿಲಿಪಿಲಿ
ಮತ್ತೆ ಮತ್ತೆ ನೀರನ್ನು ಕದಡುತ್ತಿತ್ತು……
- ಪರಮೇಶ್ವರ

- ಒಂಟಿತೋಳ

17 Nov 2016, 12:47 am
Download App from Playstore: