ಹೃದಯಕೂ ಕಣ್ಣೀರುಂಟು
ಸೂರ್ಯನಿಗೂ ಕಣ್ಣೀರುಂಟು ಆದರದು,
ಹುಟ್ಟುವ ಮುನ್ನವೇ ಹಿಂಗಿದೆ
ಅದರದೇ ಶಾಖಕೆ.
ಇರುಳಿಗೂ ಕಣ್ಣೀರುಂಟು ಆದರದು,
ಕಾಣುವ ಮುನ್ನವೇ ಕಾಣೆಯಾಗಿದೆ
ಅದರದೇ ಕತ್ತಲೆಗೆ.
ನೀರಿಗೂ ಕಣ್ಣೀರುಂಟು ಆದರದು,
ನೊರೆಯಾಗುವ ಮುನ್ನವೇ ಮರೆಯಾಗಿದೆ
ಅದರದೇ ಅಲೆಗೆ.
ಗಾಳಿಗೂ ಕಣ್ಣೀರುಂಟು ಆದರದು,
ಜಾರುವ ಮುನ್ನವೇ ಹಾರಿದೆ
ಅದರದೇ ವೇಗಕೆ.
ಸಮಯಕೂ ಕಣ್ಣೀರುಂಟು ಆದರದು,
ಸುರಿಯುವ ಮುನ್ನವೇ ಸರಿದಿದೆ
ಅದರದೇ ಚಲನೆಗೇ.
ಮೋಡಕೂ ಕಣ್ಣೀರುಂಟು ಆದರದು,
ಮೂಡುವ ಮುನ್ನವೇ ಮಡಿದಿದೆ
ಅದರದೇ ಕರಗುವಿಕೆಗೆ.
ನನ್ನ ಹೃದಯಕೂ ಕಣ್ಣೀರುಂಟು ಆದರದು,
ಜಿನುಗುವ ಮುನ್ನವೇ ಅಸುನೀಗಿದೆ
ಅದರದೇ ನೀರವ ಮೌನಕೆ.
- ಶಶಿ ಕಿರಣ
- ಅಕವಿ
09 Jan 2017, 05:47 pm
Download App from Playstore: