ನನ್ನವರು ಯಾರು

ಕತ್ತಲಲ್ಲಿ ಉದಿಸಿ ಬೆತ್ತಲಾಗಿ ಬಂದೆ
ಬೆಳಕ ಅರಸಿ ನೀ ಈ ಜಗಕ್ಕೆ!!
ಸುತ್ತಲಲ್ಲಿ‌ ನಿಂತಿಹರು ನೀ ಅರಿಯದ ಜನರು
ಬಗೆ ಬಗೆಯ ಭಂಗಿಯಲಿ ನಿನ್ನ ನೋಡುತ!!

ನನ್ನವರು ಯಾರೆಂದು ಹುಡುಕುವ ಬರದಲ್ಲಿ
ಕಣ್ಣ ಹೊರಳಿಸಿ ಅಳಲು ನೀನು ನೊಂದು!!
ಮೃದುವಾದ ಸ್ಪರ್ಶವು ಬೆಚ್ಚಗಿನ ಹಿತ ನೀಡಿ
ಸುತ್ತುವರಿಯಿತು ನಿನ್ನ ಹಿತವ ಬಯಸಿ!!

ಕಣ್ಣ ತೆರೆದು ನೋಡಲು ಕ್ಷಣವನ್ನೂ ನೀಡದೇ
ಅದರದಲ್ಲಿ ಚಿಮ್ಮಿತ್ತು ಅಮೃತ ಪಾನ!!
ಕಿವಿಗಳಿಗೆ ಕೇಳಿದ್ದು ಜೋಗುಳದ ಹಾಗಿತ್ತು
ನಿದ್ರಿಸಲು ನೀನು ಸಮಾಧಾನ!!

ಬೆಚ್ಚಿ ಎಚ್ಚರಗೊಂಡು ಮತ್ತೆ ಅಳುವುದ ಕಂಡು
ಬಿಸಿ ಉಸಿರು ಸ್ಪರ್ಶಸಿತು ನಿನ್ನ ತನುವ!!
ಮಮತೆಯ ಕರವೊಂದು ಎತ್ತಿ ಮುದ್ದಿಸಿ ನಿನ್ನ
ಎದೆಗೊತ್ತಿ ಹೇಳಿತು ಕಂದಾ ಎಂದು!!

- ಪಿ.ಜಿ.ಜ್ಯೋತಿ

28 Feb 2017, 03:20 am
Download App from Playstore: