ಆಸೆ

ನಿನ್ನ ಕುಡಿಗಣ್ಣ ಕಡಲಲ್ಲಿ
ನಾ ಮೀನಾಗುವ ಆಸೆ.
ನಿನ್ನ ಹೃದಯದ ಹಡಗಲಿ
ನಾ ನಾವಿಕಳಾಗುವ ಆಸೆ.

ನಿನ್ನ ಮನಸಿನ ಮಹಲಲಿ
ನಾ ರಾಣಿಯಾಗುವ ಆಸೆ.
ನಿನ್ನ ಕನಸಿನ ಕಾಮನಬಿಲ್ಲಲಿ
ಅಷ್ಟೂ ಬಣ್ಣ ನಾನಾಗುವ ಆಸೆ.

ನಿನ್ನ ಮೌನದ ಮಾಯೆಯಲಿ
ನಾ ಮಂತ್ರಮುಗ್ಧಳಾಗುವ ಆಸೆ.
ನಿನ್ನ ಪ್ರೀತಿಯ ಪರದೆಯಲಿ
ನಾ ಪ್ರತಿಬಿಂಬವಾಗುವ ಆಸೆ.

ನಿನ್ನ ಹೆಸರ ಆಸರೆಯಲಿ
ನಾ ನನ್ಹೆಸರ ಉಸುರುವ ಆಸೆ.
ನಿನ್ನ ಮುತ್ತಿನ ಮಳೆಹನಿಯಲಿ
ನಾ ಮತ್ತೆಮತ್ತೆ ಚಿಗುರೊಡೆಯುವ ಆಸೆ.

ನಿನ್ನ ಬಾಳಿನ ಬಿಳಿಹಾಳೆಯಲಿ
ನಾ ಬಣ್ಣಬಣ್ಣದ ಚಿತ್ತಾರವಾಗುವ ಆಸೆ.
ನಿನ್ನ ತೆರೆದ ತೋಳಿನ ತಲ್ಪದಲಿ
ನಾ ತಲೆಯಾನಿಸಿ ನಿದ್ರಿಸುವ ಆಸೆ.

ನನ್ನ ಆಸೆಗಳ ಸಂಕೋಲೆಯೊಳಗೆ
ನಿನ್ನನ್ನು ಬಂಧಿಸಿ ಕಾಡಿಸುವ ಆಸೆ.
ನನ್ನ ಬಯಕೆಗಳ ಸೆರೆಯೊಳಗೆ
ನಿನ್ನ ಸಜೆಯಾಗಿಸಿ ಮಜ ನೋಡುವ ಆಸೆ.

ಆದರೆ
ಒಂದೇ ಒಂದು ಬಿನ್ನಹ ನಿನ್ನಲಿ
ಈ ನನ್ನೆಲ್ಲಾ ಅಪೇಕ್ಷೆಗಳಿಗೆ
ನೀ ತೋರದಿರು ಉಪೇಕ್ಷೆ......

- ಮಾಧುರಿ

11 Mar 2017, 11:27 pm
Download App from Playstore: