ನನ್ನ ಕಥೆಯಿದು
ಹರಿದ ಹಾಳೆಯಲಿ ಬರೆಯದ ಕವಿತೆಯೊಂದು
ಅಕ್ಷರಗಳಿಲ್ಲದೇ ಹಾಡಾದ ಕಥೆಯಿದು.
ಕರಗಿದ ಬಾನಿನಲಿ ಕವಿಯದ ಮೇಘವೊಂದು
ಮಳೆ ಸುರಿಸದೆಯೇ ಇಳೆ ನೆನೆಸಿದ ಕಥೆಯಿದು.
ಮುರಿದ ಕನ್ನಡಿಯಲಿ ಮೂಡದ ಮುಖವೊಂದು
ಪ್ರತಿಫಲಿಸದೇ ಪ್ರತಿಬಿಂಬವಾದ ಕಥೆಯಿದು.
ಉರುಳಿದ ಮುಂಜಾನೆಯಲಿ ಅರಳದ ಹೂವೊಂದು
ಮಕರಂದ ಬೀರದೇ ಸಾರಿದ ಕಂಪಿನ ಕಥೆಯಿದು.
ಮರದಂಚಿನ ಗೂಡಿನಲಿ ರೆಕ್ಕೆಯಿರದ ಹಕ್ಕಿಯೊಂದು
ಹಾರದೆಯೇ ಮುಗಿಲಿಗೆ ಮುತ್ತಿಕ್ಕಿದ ಕಥೆಯಿದು.
ಆಳದ ಸಾಗರದಿ ಹುಟ್ಟಿಲ್ಲದ ದೋಣಿಯೊಂದು
ಮೂಡದ ಸುಳಿಗೆ ಸಿಕ್ಕು ದಡ ಸೇರಿದ ಕಥೆಯಿದು.
ಕಗ್ಗತ್ತಲ ರಾತ್ರಿಯಲಿ ಕಾಣದ ತಾರೆಯೊಂದು
ಕಾರ್ಮೋಡ ಕವಿದರೂ ಮಿನುಗಿದ ಕಥೆಯಿದು.
ನಿದಿರೆಯ ಜೋಂಪಿನಲ್ಲಿ ಕಾಣದ ಕನಸೊಂದು
ಸುಳಿವಿಲ್ಲದೇ ನನಸಾದ ಕಥೆಯಿದು.
ಬಾಡಿದ ಬದುಕಲಿ ನೊಂದ ಹೃದಯವೊಂದು
ಸಾಂತ್ವಾನ ಬೇಡದೇ ಸೆಟೆದು ನಿಂತ ಕಥೆಯಿದು.
ಮುದುಡಿದ ಮನದಲಿ ಮರೆತ ನೆನಪೊಂದು
ನೆನೆಯದೇ ನೆನಪಾದ ಕಥೆಯಿದು.
ಮೌನದ ಅಂಗಳದಲಿ ಕೇಳದ ಧನಿಯೊಂದು
ಹೇಳದ ಮಾತಿಗೆ ಸ್ಪಂದಿಸಿದ ಹೃದಯದ ಕಥೆಯಿದು.
ಬತ್ತಿದ ಬೂಮಿಯಲಿ ಬಿತ್ತದ ಬೀಜವೊಂದು
ಬೆಳಕು ಸೋಕದೆಯೇ ಬೆಳೆಯಾದ ಕಥೆಯಿದು.
ನಿಲ್ಲದ ಇರುಳಲಿ ಇಲ್ಲದ ಕಿರಣವೊಂದು
ಹೊತ್ತದ ದೀಪದ ನಂಟಿಗಾಗಿ ಬೆಳಕ ಚೆಲ್ಲಿದ ಕಥೆಯಿದು.
ಕತ್ತಲ ಕಾನನದಿ ಬೆತ್ತಲ ಮುಗಿಲಿನಲಿ
ಕಾಣದ ಮಿಂಚೊಂದು ದಾರಿ ತೆರೆದು ತಿರುವ ತೋರಿದ ಕಥೆಯಿದು.
-- ಈ ಕಥೆಯ ಪಾತ್ರದಾರಿ ಶಶಿಕಿರಣ
- ಅಕವಿ
12 Mar 2017, 10:10 pm
Download App from Playstore: