ಅಂಗನವಾಡಿ ಅಕ್ಕಂದಿರೆ..

ಅಂಗನವಾಡಿ ಅಕ್ಕಂದಿರೇ
ಬೆಂಗಳೂರ ರಸ್ತೇ ಬೀದೀಲಿ
ಅನ್ನಕ್ಕೆ ಕೈ ಒಡ್ಡಿ ನಿಂತೀರೆ?
ನಮ್ಮ ಪುಟ್ಟ ಕೂಸುಗಳ
ಸಂಬಾಳಿಸಲು ನೀವು ಪಟ್ಟ ಕಷ್ಟಗಳ
ಸರ್ಕಾರದ ಕಿವಿ ತುಂಬೀರೇ ?

ಮಂತ್ರಿ ಮಹೋದಯರಿಗೆ
ಕಂತ್ರಿ ಅಧಿಕಾರಿಗಳಿಗೆ
ಕುಂತುಂಡರೂ ತೀರದಷ್ಟು
ಕಂತೆ ಕಂತೆ ಹೊಂದಿರುವವರಿಗೆ
ಈ ಲೋಕ, ಈ ದೇಶ ಕಾಣಿರೆ.

ಪುಡಾರಿಗಳಿಗೆ ಸಾಕಾಗದಾಗ
ಲಕ್ಷ ಲಕ್ಷ ಗಿಂಬಳ
ರಾತ್ರೋ ರಾತ್ರಿ ಐದೇ ಮಿನಿಟಿನಾಗೆ
ಏರಿಸಿಕೊಳ್ವರು ತಮ್ಮ ಸಂಬಳ.
ನೀವೊ ಅ ಆ ಇ ಈ ಹೇಳಿ ಕೊಡೋ
ಬೇಲಿ ಬದಿಯ ಪಾಪದ ಹೂವುಗಳು
ಕೊಟ್ಟಾರೆಯೇ ನಿಮಗೆ
ಬಿಡಿಗಾಸು..
ತಾಕದಿರಲಿ ಈ ನೆಲಕೆ ನಿಮ್ಮ ನಿಟ್ಟುಸಿರು.

ಅಯ್ಯೋ ಅಕ್ಕಂದಿರಾ,
ದೂರದೂರಿಂದ ಇಷ್ಟು ದೂರ
ಬೇಡಿಕೆಯನೊತ್ತು ಯಾಕ ಬಂದೀರಾ?
ಮುಗಿಲಾಗೆ ಬಿದ್ದಿರಲಿಲ್ಲವೇ
ನಿಮ್ಮೂರಾಗೂ ಹಾಳು ಚಂದಿರಾ ?

- ಶ್ರೀಗೋ.

22 Mar 2017, 10:53 pm
Download App from Playstore: