ಅಯ್ಯೋ ಸೈನಿಕ...
ಅಯ್ಯೋ ಸೈನಿಕಾ..
ನಿನಗ್ಯಾಕೆ ಬೇಕಿತ್ತು
ಭ್ರಷ್ಟ ತನವ ಜಗ ಜಾಹೀರು ಮಾಡುವ ಕಾಯಕ ?
ಅದನ್ನೇ ತಿಂದು, ಮೆದ್ದು, ಹೊದ್ದು
ಮಲಗಿರುವ ಕೂಳ ಕೂಟ
ಬಿಟ್ಟಾವೆಯೇ ನಿನ್ನ
ದೇಶ ಭಕ್ತಿಯ ಕಂಡು ?
ಎಲವೋ ಪಾಪಿ ಬಡವ
ನೀ ದಂಡಿಗೆ ಸೇರಿದ್ದೇ
ಗುಂಡಿಗೆ ಗುಂಡಿಗೆಯೊಡ್ಡಿ
ಗುಡ್ಡ ಬಂಡೆಗಳ ಮೇಲೆಲ್ಲೋ
ಅನಾಥವಾಗಿ ಸತ್ತು ಮಲಗಲು...
ಆದರೆ...
ಅಯ್ಯೋ ಸಹೋದರನೆ
ನಿನ್ನ ಕೊಂದೇ ಬಿಟ್ಟರೇನೋ ಕಾಣೆ
ನಮ್ಮವರೇ ನಿನ್ನ ಬೆನ್ನಿಗೆ
ಮೋಸದ ಬಂದೂಕನಿಟ್ಟು !
ಅದೇನೂ ಹೊಸದಲ್ಲ ಬಿಡು ಅವರಿಗೆ
ದೇಶ ಭಕ್ತಿಯ ಹೆಸರಲ್ಲಿ ಹರಿಸಿದ ನೆತ್ತರನು
ಲೆಕ್ಕವಿಟ್ಟು ಹಿಡಿದಿಟ್ಟವರಾರು ?
ನಿನ್ನಂತ ಮಗ್ಗುಲ ಮುಳ್ಳು
ತೊಲಗಿದರೇನೇ ಅಲ್ಲವೇ
ಬಣ್ಣದ ದೇಶ ಭಕ್ತಿ ಮುಖವಾಡಕ್ಕೆ ಒಂದು ಬೆಲೆ ?
ಸಮಾಜದ ಕೋರೆ ತಿದ್ದಲು ಹೊರಟ
ಗಂದೆಡೆಯ ಶೂರನೆ...
ನಿನ್ನ ಸಾವಿನ ಸುದ್ದಿ ಸುಳ್ಳಾಗಲಿ..
ನಂಜು ಹುಳುಗಳ ಎದೆಗೆ
ನಿನ್ನ ದೈರ್ಯವೆ ಮುಳ್ಳಾಗಲಿ.
- ಶ್ರೀಗೋ.
24 Mar 2017, 09:57 am
Download App from Playstore: