ಪ್ರೇಮಿಗಳು...

ಆ ಬೆಟ್ಟದ ತುದಿಯ ಬೋಳು ಮರದ ಕೆಳಗೆ
ಸದಾ ಭೇಟಿ ಆಗುವ ಆ ಪ್ರೇಮಿಗಳು...
ಐನ್ ಸ್ಟೈನ್ ನ ವಿಶೇಷ ಸಮಯದ ನಿಯಮ
ಬಹುಶಃ ಇವರಿಗೂ ಅನ್ವಯ ಆಗಿತ್ತೋ ಏನೋ
ನಮ್ಮ ಇಡೀ ಒಂದು ದಿನ ಇವರ ಪಾಲಿಗೆ
ಒಂದು ಗಳಿಗೆಯಷ್ಟೂ ಆಗಿರಲಿಲ್ಲ.

ಬೋಳು ಮರ ನೆರಳು ಕೊಡದಿದ್ದರೂ
ಬಿಸಿಲು ಅವರಿಗೆ ತಾಕಲಿಲ್ಲ
ಬೀಸುವ ಗಾಳಿಗೆ ತೂರಿದ
ಆ ಸುಂದರಿಯ ಕೂದಲ ಕಾರಣಕ್ಕೆ
ಆಕೆಯ ಮುಖ ಸರಿಯಾಗಿ ತೋರಲಿಲ್ಲ.

ಏನೋ ಮಾತು,
ನಡು ನಡುವೆ ಮುದ್ದು
ಮತ್ತೇನನ್ನೂ ನಾನು ಕದ್ದು ನೋಡಲಿಲ್ಲ.
ಅವರ ಈ ಮುಗಿಯದ ಮಾತಿನ ಸಂತೆಯಲ್ಲಿ
ಕಳೆದು ಹೋಗಿರಬಹುದಾದ ಚಿಂತೆ
ಇತ್ತೋ ಇಲ್ಲವೋ ತಿಳಿಯಲಿಲ್ಲ.

ವಸಂತನಾಗಮನ ಹತ್ತಿರವಾದಂತೆ..
ಪ್ರೇಮಿಗಳೆದೆಯಲ್ಲಿ ಹೊಸ ಕಾವ್ಯ
ಹುಟ್ಟಿರಬಹುದೇನೋ ಎಂಬ ನನ್ನ ಕಲ್ಪನೆ..
ಸುಳ್ಳಾಗುತ್ತ ಸಾಗಿದ್ದು ಚಿಗುರೆಲೆಯಷ್ಟೇ ಸತ್ಯ.
ಮುಂಗಾರು ಮೋಡ ಅಂಬರವ ಮುಸುಕಿದಂತೆ
ತೆರೆ ತೆರೆಯಾಗಿ ಮುಸುಕುತಿತ್ತು
ಪ್ರೇಮಿಗಳ ಮೊಗದಲ್ಲಿ ಚಿಂತೆ.

ಕೊನೆಗೊಂದು ದಿನ..
ಪ್ರೇಮಿಗಳ ಬೋಳು ಮರದ ಕೆಳಗೆ
ಜನವೋ ಜನ...
ಬಿದ್ದೋಡಿ ಹೋಗಿ ನೋಡಿದರೆ
ಅಲ್ಲೆರಡು ಹೆಣ.
ಮರದೆಲೆಗಳು ಚಿಗಿಯುತ್ತಿದ್ದವು...
ವಸಂತ ಬರುತ್ತಿದ್ದ ಭೂಮಿಗೆ...
ಪ್ರೇಮ ಪಕ್ಷಿಗಳು ಹಾರಿದ್ದವು ಬಾನಿಗೆ.

- ಶ್ರೀಗೋ.

27 Mar 2017, 08:23 am
Download App from Playstore: