ದಿಬ್ಬಣ
ಅತ್ತ ರಾಜನ ಮದುವೆಯ ದಿಬ್ಬಣದ ಧನಿ ಕೇಳಿ
ಸುತ್ತ ಊರಿನ ಜನರು ದಂಡೆತ್ತಿ ಹೊರಟಿಹರು!!
ಎತ್ತ ನೋಡಿದರತ್ತ ದೀಪಗಳ ಆರತಿ
ಬೆಳಕ ತೋರಿಹುದು ದಿಬ್ಬಣದ ಊರಿಗೆ!!
ತಳಿರು ತೋರಣಗಳಲಿ ಆ ಊರ ಸಿಂಗಾರ
ಮುಗಿಲೆತ್ತರ ಚಪ್ಪರವು ಅರಮನೆಯ ಅಂಗಳದಿ!!
ರತ್ನ ಖಚಿತ ರಥವನ್ನು ಹೊತ್ತು ನಿಂತಿಹವು
ಜೋಡಿ ನಕ್ಷತ್ರದ ಹೊಳಪುಳ್ಳ ಕುದುರೆಗಳು!!
ಸಂಗೀತ ನರ್ತನವು ವಾದ್ಯ ಸಂತೋಷ
ರಾಣಿಗೆ ಏಕಿಂದು ಇಂತಹ ಸಂಕೋಚ!!
ಮುತ್ತು ರತ್ನದ ಒಡವೆ ಈ ಚಂದ ವಧುವಿಗೆ
ಸ್ವಚ್ಛ ವಸ್ತ್ರದ ಉಡುಪು ನವ ವಧು ವರರಿಗೆ!!
ದಿಬ್ಬಣದ ಊರಲ್ಲಿ ಸಂತಸದ ಸಂಭ್ರಮ
ಸುತ್ತ ಊರ ಜನಕೆ ಭೋಜನ ಉಡುಗೊರೆಯು!!
ಎತ್ತ ನೋಡಿದರತ್ತ ದಿಬ್ಬಣದ ಸಡಗರ
ಗುಂಪು ಗುಂಪಲಿ ಜನರ ಸಂತಸದ ವಿನಿಮಯ!!
- ಪಿ.ಜಿ.ಜ್ಯೋತಿ
02 Apr 2017, 03:19 pm
Download App from Playstore: