ಸಯಾಮಿ ಕವಿತೆ
(ಗಾಲಿಬ್ ಪ್ರೇರಿತ)
ನಾನು ಕವಿತೆ ಕಟ್ಟುವಾಗ
ಸಂಜೆಯ ಪ್ರಸ್ತವಾಗುತ್ತದೆ
ಕತ್ತಲು ಗರ್ಭಧರಿಸಿ ಸೀಮಂತಕೆ
ಚಂದಿರನ ಕಾಯುತ್ತದೆ
ಅವಳ ನೆನಪ ಸೂಲಗಿತ್ತಿಯಿಂದ
ವಿರಹ ವೇದನೆಯೆಂಬ
ಸಯಾಮಿ ಕವಿತೆಯ ಹೆರಿಗೆ ಆಗೋದು ಆಗಲೇ
ನನ್ನ ಕವಿತೆಗೆ ಹೆಸರಿಡಲು
ಅಲೆಯ ಬಾಡಿಗೆ ಪಡೆದು
ಮೂಗಿಲೂರಿಗೆ ಹೊರಡುತ್ತೇನೆ
ಉಬ್ಬಸದ ಕಡಲು ನಗುವ
ಜಾಯಮಾನವ ಪ್ರಕಟಿಸುವಾಗ
ಕವಿತೆಯ ಹೆಸರು ಮೊಳಕೆ
ಹೊಡೆಯದ ಮರವಾಗುತ್ತದೆ
ನನ್ನ ಕನಸಿನ ಕದ ತಟ್ಟುವ
ಅವಳ ಕಿರು ಬೆರಳಿಗೆ ನಾನಿಡುವ
ಮುತ್ತು ಓದಿದರೂ ಮುಗಿಯದ ಕಾವ್ಯವಾಗುತ್ತದೆ
ಪದಗಳ ತುಂಬಿದ ಎದೆಯೊಳಗಿನ
ಹಣತೆ ಮಿನುಗಿ ಅವಳ
ಮೌನಕೆ ಬಲಿಯಾಗುತ್ತದೆ
ಹಣತೆಯ ಗೋರಿಗೆ ಪದಗಳ
ಕಫನ್ ಹೊಲಿದು
ನೋವಿನ ಮಿಝಾನ್ ಮೇಲೆ
ನನ್ನ ಕವಿತೆಯು ಮರು ಹುಟ್ಟು
ಪಡೆಯುತ್ತದೆ
ಹಲ್ಕಟ್
*ಅವಿಜ್ಞಾನಿ*
- ಅವಿಜ್ಞಾನಿ
02 Apr 2017, 10:21 pm
Download App from Playstore: