ಬರ ಮತ್ತು ರೈತನ ಗೋಳು

ಬರಬೇಕೆ ಬರ ರೈತನಾ ಬಾಳಲಿ ಹೆಮ್ಮಾರಿಯಂತೆ
ಕಿತ್ತುತಿನ್ನುವ ಬಡತನದ ಬೇಗೆ
ಬಿತ್ತಿದಾ ಬೆಳೆಯೂ ನಾಶವಾಗೆ
ಭೂಮಿಯೆಲ್ಲಾ ಬೆತ್ತಲಾಗಿ
ಬದುಕುವಾಸೆ ಕತ್ತಲಾಗಿ
ಕಾರ್ಮುಗಿಲಿಗಾಗಿ ಕಂಬನಿಗರೆದಿದೆ

ಸಾಲ ಸೋಲ ಖಾಲಿಯಾಗಿ
ಮೀಟರ್ ಬಡ್ಡಿ ದುಪ್ಪಟ್ಟಾಗಿ
ದನಕರುಗಳನು ಕಸಾಯಿಖಾನೆ ಗೆ ನೂಕಿ
ನಾಕವೆಲ್ಲ ನರಕವಾಗಿ ಹನಿ ನೀರಿಗೆ ಕಾದಿದೆ
ಇನ್ನು ನಿಮಗೆ ಕೊಡಲು ನನಗೆಲ್ಲಿಂದ ಹಣ ಬರುವುದೇ?

ಮಾನಕಂಜುವ ಮಕ್ಕಳು ನಾವು
ಕಾವ ದೈವಗಳೇ ಮನ್ನಿಸಿರಿ ನೀವು
ಮಳೆಯನು ತರಿಸಿ ವುಳಿಸಿರಿ ಪ್ರಾಣವ
ಮನೆ ಮಾನ ಹರಾಜಿಗಿದೆ ನಡೆಯಿಸಿ ಪವಾಡವ
ಚುನಾವಣೆಗೆ ನಿಂತ ರಾಜಕಾರಣಿಯಂತೆ
ನೀಡದಿರಿ ಪೊಳ್ಳು ಭರವಸೆಯ

ಮಾನವೇ ಹೋಗಿರೆ ಪ್ರಾಣಕೇನು ಬೆಲೆ
ಕಾಯುವವ ಬರದಿರೆ ಕೊಲ್ಲುವವನ ಕರೆಯದೆ ದಾರಿ ಇದೆಯೇ?
ಈಸಬೇಕಂತೆ ಇದ್ದು ಜಯಿಸಬೇಕಂತೆ
ತತ್ವ ಹೇಳುವ ಮಠಾಧೀಶರು ಇಲ್ಲಿ ನೂರುನೂರು.
ಭಾಷಣ ಬಿಗಿಯುವ ಪುಢಾರಿಗಳಿಗೆ ಹೇಳಿಕೊಡಬೇಕೇ ಮೊಸಳೆ ಕಣ್ಣೀರು

ಮುಗ್ಧ ಮಕ್ಕಳ ಬೀದಿಪಾಲು ಮಾಡಿ ಹೋಗಲೇ ಅಯ್ಯೋ ನನ್ನ ಕೈಯಾರೆ ವಿಷ ವುಣಿಸಲೇ
ಮುದ್ದು ಮಡದಿಯೇ ಅಂದು ನಿನ್ನೊಸಲಿಗಿಟ್ಟೆ ಕೆಂಪು ಕುಂಕುಮ
ಇಂದುಣಿಸುತಿರುವೆ ಪಾಷಾಣದ ಉಂಡಿಗೆಯ ಸಂಭ್ರಮ

ಅಜ್ಜನ ತುತ್ತು, ಅಜ್ಜಿಯ ತುತ್ತು, ಅಪ್ಪನ ತುತ್ತು, ಅಮ್ಮನ ತುತ್ತು, ಬರದ ತುತ್ತು, ದೇವರ ತುತ್ತು, ಸಾಲಿಗನ ತುತ್ತು, ಪುಢಾರಿ - ಪಾಶಂಢಿಗಳ ತುತ್ತು, ಬೆವರ ಕಂಬನಿಯ ತುತ್ತು.
ಬನ್ನಿ ಹೋಗೋಣ ಮನುಜರನು ಮನುಜರಂತೆ ನೋಡುವಾ ತಾಣಕೆ,ಹಸಿವಿರದ, ನೋವಿರದ, ಅಪಮಾನವಿರದ ಜಾಗಕೆ, ಚಿರಶಾಂತಿಯ ನಿದ್ರೆಗೆ

ಎಂದಿನಂದದಿ ಮಾಧ್ಯಮದಿ ವಿಜೃಂಭಿಸುತಿದೆ ರೈತಕುಟುಂಬ ದುರ್ಮರಣದ ವಿಶೇಷ ಸುದ್ದಿ
ದೌಡಾಯಿಸಿ ಬಂದಿತು ರಾಜಕೀಯದ ಆಶಾಡಭೂತಿ.
ಬದುಕಿದಾಗ ಬೊಬ್ಬೆಇಟ್ಟರೂ ಬಾರದಾ ಇವರು, ಸತ್ತಾಗ ಬಂದು ಸಾಂತ್ವಾನ ಮಾಡುವರು.
ರೈತರ ಸಾವು-ಬದುಕಿನ ಹೋರಾಟ ಇವರಿಗಂತೆ ಚದುರಂಗದಾಟ

ಸತ್ತ ಹೆಣದಮೇಲೆ ಮದಿರೆಯ ಕಾಯಿಸಿ ಮದದಿ ಮೆರೆದಾಡುವ ಮಾನಗೇಡಿಗಳು, ರಾಜಕಾರಣದ ಹೇಸಿಗೆಯಲ್ಲಿ ಹೊರಳಾಡುವ ಜಂತು ಹುಳುಗಳು.
ರೈತರಾಸಾವು ಇವರಿಗೊಂದು ಪ್ರಚಾರದ ಗಿಮಿಕ್ಕು,
ನೀವ್ ಸತ್ತರೆ ಬೆಂಕಿ ಇಡರು ಯಾರು ನಿಮ್ಮ ಹೆಣಕ್ಕೂ

ಹಂಸಿನಿ

- ವಿಸ್ಮಯ

12 Apr 2017, 07:52 pm
Download App from Playstore: