ಮಳೆಯ ನೋಡಿರಣ್ಣಾ
ಮಳೆಯ ನೋಡಿರಣ್ಣಾ
ಕೇಳುವವರ ಕಿವಿಯನು ಮೊರೆಯುವಂತೆ ಗುಡುಗುಡು ಗುಡುಗುತ
ಕತ್ತಲ ತುಂಬಿದ ಬಾನಲ್ಲಿ ಮಿಂಚುಳುವಿನಂತೆ ಮಿಂಚುತ
ನೋಡುವ ಕಣ್ಣನ್ನೇ ಕೋರೈಸುವ ಸಿಡಿಲನ್ನೆ ಸಿಡಿಸುತ
ಪಟಪಟನೆ ಸುರಿಯುತಿರುವ ಮಳೆಯ ನೋಡಿರಣ್ಣ.....
ಬಾಂದಳದಲ್ಲಿ ತೂತನ್ನೇ ಕೊರೆಯುವ
ಗಗನದಿಂದಿಳಿದು ಭೂತಾಯಿಯ ಅಪ್ಪುವ
ಬಿಸಿಲ ಜಳಕ್ಕೆ ಒಣಗಿದವಳಿಗೆ ತಂಪೆರೆಯುವ
ಬಾಯ್ಬಿರಿದವಳ ಒಡಲಲ್ಲಿ ಹಸಿರನ್ನೆ ಚಿಗುರಿಸುವ
ಮಳೆಯ ನೋಡಿರಣ್ಣಾ
ಪಟಪಟನೆ ಸುರಿಯುತಿರುವ ಮಳೆಯ ನೋಡಿರಣ್ಣ....
ಕಣ್ಣೀರ ಹೊತ್ತು ನಿಂತ ಅನ್ನದಾತನ ಕಣ್ಣೀರ ಒರೆಸುವ
ಮನಸೊಳಗಿನ ಮಣ ಭಾರ ನೋವನು ಕರಗಿಸುವ
ಸಾಲವೆನ್ನುವ ನೇಣುಗಂಬದ ಕುಣಿಕೆಯ ಕಳಚುವ
ಮನೆಯೊಳಗಿನ ಶೂನ್ಯವನ್ನೆ ಸೊನ್ನೆಯಾಗಿಸುವ
ಮಳೆಯ ನೋಡಿರಣ್ಣಾ
ಪಟಪಟನೆ ಸುರಿಯುತಿರುವ ಮಳೆಯ ನೋಡಿರಣ್ಣಾ.....
- ಶ್ರೀಕಾವ್ಯ
20 Apr 2017, 09:20 pm
Download App from Playstore: