ಕಾಣದ ಬದುಕು..

ಕೊನೆಯ ವಿದಾಯ ಅದಾಗಿರಲಿಲ್ಲ
ಮುಂದಿನ ದಾರಿಗೆ ಬೀಗ ಹಾಕಿತ್ತು..
ಅವಳಿಗದು ಅನಿವಾರ್ಯ
ಸಂಸಾರದ ಜವಾಬ್ದಾರಿ ಹೆಗಲ ಮೇಲಿತ್ತು..
ಬಾಡಿ ಹೋಗಿರುವ ಮುಖ,
ಜೋತು ಬಿದ್ದಿರುವ ಹಲ್ಲುಗಳು,
ನಿದ್ದೆ ಮರೆತ ಕಣ್ಣುಗಳು..
ಹಸಿವಿನಿಂದ ನರಳುತ್ತಿರುವ ಕಂದಮ್ಮಗಳು..
ಯಮನಂತೆ ಸದಾ ಕಾಡುತ್ತಿರುವ ಖಾಯಿಲೆ,
ಮಾತು ನೀಡಿ ಕೈಬಿಟ್ಟು ಹೋದ ಗಂಡ..

ಆತ ಅವಳಿಗೆ ಸರ್ವಸ್ವವೂ ಆಗಿದ್ದ
ಅವಳು ನಡೆವ ದಾರಿಯಲಿ ಮಲ್ಲಿಗೆ
ಚಪ್ಪರ ಹಾಕಿಸಿದ್ದ..
ಬಣ್ಣದ ಮಾತುಗಳನ್ನಾಡಿ ಪ್ರೀತಿಯ
ಮಾಯೆಯೊಳಗೆ ಬೀಳಿಸಿದ್ದ..
ವಯಸ್ಸಿನ ಆಕರ್ಷಣೆಗೆ ಆಕೆ ಮರುಳಾದಳು
ತಂದೆ ತಾಯಿಯ ತೊರೆದು ಪ್ರೀತಿಗೆ
ಮುನ್ನುಡಿ ಬರೆದಳು..

ವರ್ಷಗಳು ಉರುಳಿತ್ತು,
ಕಂದಮ್ಮಗಳು ರಚ್ಚೆ ಹಿಡಿದು ಗೋಗರೆಯುತ್ತಿತ್ತು..
ಬಡತನ ಕಿತ್ತು ತಿನ್ನುವ ಹಾಗಿತ್ತು.
ಆಕೆಯ ಜೀವನ ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬರಡಾಗಿತ್ತು.
ಜೊತೆಯಾಗಿ ಬಾಳಬೇಕಾದವನು ಕುಡಿತದ ದಾಸನಾಗಿ ವಿಧಿವಶನಾದ..

ಪ್ರೀತಿ ಎಲ್ಲವನ್ನೂ ಮರೆಸಿತ್ತು
ಸ್ವತಃ ಬದುಕನ್ನೂ ಕೂಡ..
ಬರಿಯ ಕಣ್ಣಿಗೆ ಜಗತ್ತು ಸುಂದರವೇ ನಿಜ,
ಆದರೆ ನಡೆವ ದಾರಿಯ ರೂಪಿಸುವವರು
ನಾವೇ ತಾನೇ..!!

- ನಮಿತ ಗಟ್ಟಿ

21 Apr 2017, 11:23 am
Download App from Playstore: