ಎಲ್ಲಕ್ಕು ಮೂಲ ನೀನೆ ಅಲ್ವಾ

ಹಗಲಿರುಳು ದುಡಿವರು
ನಿನಗಾಗಿ
ನೀನಿಲ್ಲದೆ ಉಳಿಯರು
ಯಾರು ಇಲ್ಲಿ

ಚಂಚಲೆಯು ನೀನು
ಅಲೆಯುವೆವು ನಾವು
ನಿನ್ನ ಕಂಡು,ಮೋಹ ಗೊಂಡು
ಅಳಿವೆವು,ಎಲ್ಲ ಕಳಕೊಂಡು

ನೀ ಒಲಿದವರನ್ನು
ಮುತ್ತುವರು ಇರುವೆಗಳಂತೆ
ನಿನ್ನ ಬೇಡುವರನ್ನು
ಅಟ್ಟುವರು ಶ್ವಾನದಂತೆ

ಒಂದೊತ್ತಿನ ಕೂಳಿಗು
ಅಲೆಯುವರು ಒಂದೆಡೆ
ಕೋಟಿ- ಕೋಟಿ ಕಂತೆಗಳ
ಹಾಸಿ ಒದೆಯುವರು ಇನ್ನೊಂದೆಡೆ

ನವ- ಮಾಸಗಳು ಬಸಿರಲಿ
ಹೊತ್ತು- ಹಡೆವಳು ತಾಯಿ
ಎಲ್ಲ ನೋವ ನುಂಗಿ ಹರಸಿದವಳ
ಕರುಳ ಬಗೆವರು ನಿನಗಾಗಿ


ಅಷ್ಟ- ಲಕ್ಷ್ಮಿಯೆಂದು ನಿನ್ನ
ಬರಮಾಡುವರು ಬಾಗೀನ ನೀಡಿ
ಪೂರೈಸಿಕೊಳ್ಳಲೆಂದು ತಮ್ಮ
ಅನಿಯಮಿತ ಬಯಕೆಗಳನ್ನ

ಹುಟ್ಟು- ಉಚಿತ, ಸಾವು- ಖಚಿತ
ಕಲಿಯುಗದಲಿ ಇದಾಗಿದೆ ಗತ
ಹುಟ್ಟು-ಸಾವು ದುಬಾರಿ
‌ನಡುವಿನ ಬಾಳಿಗೆ ನೀನೆ ರಾಯಬಾರಿ

ಶ್ರಿಮನ್ನಾರಯಣನ ಸತಿ
ನೀನೆ ನಮಗೆಲ್ಲ ಗತಿ
ಜಗದಿ, ಯಾತಕೀ ಪಜೀತಿ
ನೀನೆ ಎಂದೆಂದಿಗು ಅತಿ- ಗತಿ!


ಶಾರಧ

- ಶಕುಂತಲಾ

23 Apr 2017, 10:53 pm
Download App from Playstore: