ಜಗನ್ನಿಯಾಮಕ ವೈಣಿಕ
ನಿನ್ನ ಮಡಿಲ ಪುಟ್ಟ ವೀಣೆ ನಾನು
ನುಡಿಸುತಲಿರುವೆ ಜಗವೆಂಬ ವೀಣೆಯನು
ಎಲ್ಲೋ ಅಡಗಿ ಓ ವೈಣಿಕ
ನೀನು ನುಡಿಸೆ ನಾನು ನುಡಿವೆ
ನುಡಿಸಿದರು ಅಪಶೃತಿಯನು
ಕೈಮುಗಿದು ಬೇಡುವೆ ಜಗದ್ವ್ಯಾಪಕ
ನಿನ್ನ ಸ್ವರ ಲಯದ ತಾನವ ಅರಿತವರು ಯಾರಿಲ್ಲ
ನಿನ್ನ ಕಲಾಶಕ್ತಿಯಲಿ ಒಂದಿನಿತೂ ಕುಂದಿಲ್ಲ
ಆಲಿಸಿಯೂ ಅರಿಯದೆ ಹೋದೆ ಸಹೃದಯ ನಾನಲ್ಲ
ಒಂದೊಮ್ಮೆ ನುಡಿಸುವೆ ಶೋಕ ಗೀತೆಯನು
ಮತ್ತೊಮ್ಮೆ ನುಡಿಸುವೆ ಆನಂದದ ಭೈರವಿಯನು
ಮುಂದೇನೋ ಅರಿಯದೆ ಮೂಕರಾಗ ಹಾಡುತಿಹೆನು
ತಂತಿಮುರಿದ ವೀಣೆ ನಾನು
ಹೊಮ್ಮಿಸಲು ಸಾಧ್ಯವೇ ಹೊಸನಾದವನ್ನು
ಸರಿಪಡಿಸು ಬಾರಾ ಬದುಕೆಂಬ ವೀಣೆಯ ತಂತಿಯನು ಓ ವೈಣಿಕಾ
ನಿನ್ನ ಕಾಣದೆ ನಡುಗುತಿದೆ ಸ್ವರ
ಬಾಳ ಧ್ವನಿಯನು ಸೇರಿಸು ತೀರ
ಬಾ ರಸಧಾರ ಓ ಜಗನ್ನಾಟಕ ಸೂತ್ರಧಾರ
ಹಂಸಿನಿ
- ವಿಸ್ಮಯ
02 May 2017, 07:13 pm
Download App from Playstore: