ನೇಣು ಹಾಕಿದ ನಿವೇದನೆ

ಬೀಗ ಜಡಿದ ಬಿಗುಮಾನದ ಹಿಗ್ಗಿಗೆ ಒಗ್ಗಿಕೊಂಡವಳ ಸೊಗ್ಗಿನಲ್ಲಿ ನನ್ನತನದ ಕಳ್ಳತನವಾಗಿದ್ದು ತಿಳಿಯದೇ ಉಳಿಯಿತು
ಜಾಲಿ ಮರದ ನೆರಳಿನಲ್ಲಿ ನೇಣು ಹಾಕಿದ ನೀವೇದನೆಯ ಅಂತಿಮ ಸಂಸ್ಕಾರಕ್ಕೆ ಕ್ಷಣಗಣನೆ

ರೆಕ್ಕೆ ಮುರಿದ ಗಡಿಯಾರದ ಗಂಟಲಿಗೆ ಸಿಕ್ಕ ಸಮಯದ ಪುಕ್ಕಲು ವಾರ್ತೆಯನ್ನೊಮ್ಮೆ ನವಿರಾಗಿ ನೇವರಿಸುತ್ತೇನೆ
ಮದಿರೆ ನಶೆಯ ಕ್ಲಿಷೆಗಳು ಮಾತ್ರ ಒಡಲ ಉರಿಗೆ ಮುಲಾಮು ಹಚ್ಚುತ್ತದೆ

ತೇಗು ತಿಂದ ಆರ್ತನಾದ ಮೌನ
ರಾಗದಲ್ಲಿ ತಾಳ ತಪ್ಪುವಾಗ ಒಪ್ಪಲಾರದ ಒಕ್ಕಣೆಯೊಂದು
ಮುಂದೆ ದುರುಗುಟ್ಟುತ್ತಿರುತ್ತದೆ
ನನ್ನ ನಾಳೆಯ ತಿಕ್ಕಲು ಕನಸಿನ ಒಕ್ಕಲೇಳುವುದು ಆವಾಗಲೇ

ಬಿರಿದ ಮಲ್ಲಿಗೆ ಮುಡಿಯಿಲ್ಲದ
ಜಡೆಯಲ್ಲಿ ಮಡಿಯುವಾಗ
ಮಣಭಾರ ನೋವೊಂದು ಹೆಗಲೇರಿ
ಭುಜದಲ್ಲಿ ಸಂಸಾರ ಮಾಡುತ್ತದೆ
ನೇಣು ಹಾಕಿದ ನಿವೇದನೆಯ
ಸಂಸ್ಕಾರ ಆಗಿಯೇ ಹೋಗುತ್ತದೆ

ಅವಿಜ್ಞಾನಿ

- ಅವಿಜ್ಞಾನಿ

05 May 2017, 10:15 pm
Download App from Playstore: