ಕೇಳೆನು‌ ನಲ್ಲ

ಕೇಳೆನು ಗೆಳೆಯ ಆ ಕಾಮನಬಿಲ್ಲ ತಂದಿರಿಸು ನನಗಾಗಿ
ಆ ಬಣ್ಣಗಳ ನಾ ಮೋಹಿಸಿರುವೆನೆಂದು

ನಾ‌ ಹೇಳೆನು ಆ ಶಶಿಯ ಕೊಂಡು ತಾ ನನಗಾಗಿ
ಆ ಕಾಂತಿಯು ಬೇಕಿದೆ ನನ್ನ ‌ಸಿಂಗರಿಸಲೆಂದು

ನಾ‌ ಆಸೆಪಡೆನು ತಾ ಆ ಇರುಳ ಎನಗಾಗಿ
ನನ್ನ ಕಣ್ಣ ಸಿಂಗರಿಸುವ ಕಣ್ಣ ಕಾಡಿಗೆಗೆಂದು

ನಾನು ಇಚ್ಛಿಸೆನು ನಕ್ಷತ್ರ ಪುಂಜವ ಕೊಂಡು ಬಾ‌ ನನಗಾಗಿ
ಮಾಲೆ ಕಟ್ಟಿ ಮುಡಿಗೆ ಏರಿಸಿ ಆನಂದಿಸಬೇಕೆಂದು

ನಾ ಬಯಸೆನು ಆ ಸೂರ್ಯನ ಧರೆಗಿಳಿಸು ನನಗಾಗಿ
ಅವನು ನನ್ನಣೆಯ ಸಿಂಧೂರವಾಗಲೆಂದು

ನಾ ಗೊಣಗೆನು ತಾ ಆ ಮಳೆರಾಯನ ನನಗಾಗಿ
ನನ್ನೆಲ್ಲ ನೋವ‌ ಕಣ್ಣೀರೆಲ್ಲ ಒರೆಸಲೆಂದು


ನನ್ನ ಬಯಕೆಗಳೇನಿದ್ದರು
ಆ‌ ಕಾಮನಬಿಲ್ಲ ಕಂಡಾಗ ತೋರಿಸು ಕೈ ಹಿಡಿದು ಜೊತೆ ನಿಂತು ಮತ್ತೊಮ್ಮೆ ನನ್ನ ಮಗುವಾಗಿಸುವವನಾಗು
ಆ ಶಶಿಯಂದವ ನೋಡುತ ಮೈಮರೆತಾಗ ನಿನ್ನ ಪ್ರೀತಿಯ ಅಂದವ ನನಗುಣಿಸಿ ಅವನ ಮರೆಸುವವನಾಗು
ಆ ಇರುಳಲಿ ಬೆಚ್ಚಿ ನಿಂತಾಗ ಜೊತೆ ನಡೆದು ದಾರಿ ತೋರುವ ಸಹಪಾಠಿಯಾಗು
ಆ ನಕ್ಷತ್ರಗಳ ಪುಂಜವ ಜೋಡಿಸಿ ಚಿತ್ರ ಬರೆಯುವಾಗ ಜೊತೆಗಾರನಾಗು
ಸೂರ್ಯನ ಉರಿ ಬಿಸಿಲ ಕಂಡು ಸೋತಾಗ ನೆರಳ ಅರಸಿ ನೀಡುವವನಾಗು,
ಆ ಮಳೆರಾಯನ ಕಂಡು ಮನಸು ಕುಣಿವಾಗ, ನೋವಲಿ ಸೋತು ನಿಂತಾಗ ಅವನ ಹನಿಯ ಮಾಲೆಯೊಳಗೆ ನನ್ನ ನಲಿಸುವವನಾಗು

- ಶ್ರೀಕಾವ್ಯ

22 May 2017, 09:31 pm
Download App from Playstore: