ಅವಿತಿಡುವುದ ಕಂಡುಕೊಂಡಿರುವೆ....

ಸಣ್ಣ‌ ಸಣ್ಣ ನೋವುಗಳಿಗೂ ನೊಂದು
ಅಮ್ಮನ‌ ಮಡಿಲ ಸೇರಿ
ಮೊಗವ ತೋರದೆ ಅತ್ತ ಕ್ಷಣಗಳು ನೆನಪಿನಲ್ಲಿ ಇಟ್ಟಿರುವೆ....

ಯಾರೇನೊ‌ ಎಂದರೆಂದು ಕಣ್ಣಾಲಿಗಳಲಿ ನೀರು ತುಂಬಿ
ಅಮ್ಮನ ಮುಖವ ನೋಡುತ‌ ನಿಂತಾಗ
ಕಣ್ಣಲ್ಲೆ ಕಣ್ಣೀರ‌ ಒರೆಸಿದ‌ ನೆನಪುಗಳ‌ ಮರೆಯಲಾರದಾಗಿರುವೆ...

ಕಂಡ ನೋವುಗಳ ಲೆಕ್ಕವಿಟ್ಟಿಲ್ಲ
ಮಾಡಿದ ಅಪಮಾನ ಅನುಮಾನಗಳ ನೆನಪಗಳು ನನ್ನ ಬಿಟ್ಟಿಲ್ಲ
ಸೋಲುಗಳೆಲ್ಲ ಜೀವನದ ಮುಖವ ತೋರಿಸುವ ಪಾಠವಾಗಿ ಕಲಿತಿರುವೆ....

ಮನಸಲಿ ಅಗ್ನಿಪರ್ವತವೇ ಹೊತ್ತಿ ಉರಿಯುತ್ತಿದ್ದರು
ಕಣ್ಣಲಿ ನದಿಯೆ ಹರಿದು ಹೋಗಲು‌‌ಕಾಯುತ್ತಿದ್ದರು
ಅಮ್ಮನ ಮಡಿಲ ಸೇರದೆ ಅವಳಿಗೆ ನಾ ಧೈರ್ಯವಂತೆಯಾಗಿರುವೆ ಎಂದು ನೆಮ್ಮದಿ ಕೊಟ್ಟಿರುವೆ .....

ನೋವುಗಳೆಲ್ಲ ಏನೇನು ಅಲ್ಲವೆಂಬಂತೆ ಕಾಣುವ ಸ್ಥೈರ್ಯವಿಲ್ಲ
ಕಣ್ಣಂಚಲಿ‌ ಅವು ಬಂದು ಜಾರದಂತೆ
ಮರೆಮಾಚಿ ನಗುತ ಎಲ್ಲವ ಮರೆಸುವುದ ಕಲಿತಿರುವೆ ...

ಕಣ್ಣ ಹನಿಗಳಲಿ ಅವುಗಳು ಬಾರದಂತೆ‌ ಬೀಗ ಜಡಿದು
ನಗುವುದ ಕಲಿತು , ನಗಿಸುವುದ ಕಲಿಯುತ್ತಿರುವೆ
ಅದರೊಳಗೆ‌ ಕಾಣದ ಮುಖವ ಅವಿತಿಡುವುದ ಕಂಡುಕೊಂಡಿರುವೆ
ಆದರೆ ನನ್ನ ಮನಸೊಳಗೆ ಅವುಗಳು ಪ್ರವಾಹಿಸಿ ಕಾಡಿಸುವುದ ತಡೆಯಲಾರದೆ ಸೋತಿರುವೆ....

- ಶ್ರೀಕಾವ್ಯ

27 May 2017, 01:25 pm
Download App from Playstore: