ಮಾತೆಲ್ಲ‌ ಮುಗಿದ ಮೇಲು.....

ಮಾತೆಲ್ಲ ಮುಗಿದಮೇಲು
ಹೇಳಲು ಉಳಿದಿವೆ ಬಹಳಷ್ಟು ಸಾಲು
ಕೆಲವೊಮ್ಮೆ ಹೇಳದೆ ಕೂಡಿಡುವುದೆ ಮೇಲು....

ಮಾತು ಮುಗಿದರು
ಮೌನವು ಬಂದು ಬಿಗಿದಪ್ಪಿದರು
ನಿಲ್ಲದು ಮನಸಲೆ‌ ಉಳಿದ ಮಾತುಗಳ ತಕರಾರು....

ಆಡಿದ‌‌ ಮಾತು ನೂರಾದರು
ಮಾತಲಿ ಬರಲಾಗದವು ಸಾವಿರವಾದವು
ಮೌನವೆ ನಿಜವೆಂದು ನಂಬಿದರು
ಮನಸೊಳಗೇ ಉಳಿದ ಮಾತುಗಳು ಮರೆಯಾಗುವವು...

ಉಳಿದವು ಒಮ್ಮೊಮ್ಮೆ ಮೌನದಿಂದ ಹೊರಗೋಡಿ ಬರುವವು
ಮಾತಿನ ಮನೆಯ ಕದತಟ್ಟಿ ಒಳನುಸುಳಲು ನೋಡುವವು
ಮತ್ತೇನೊ ನೆನೆನೆನೆದು ಮತ್ತೆ ಮೌನದಲಿ ಸೇರಿ ಬೀಗಜಡಿದು ಕೂರುವವು
ಆಗಾಗ ಮಾತಲಿ ಬಂದು ನುಸುಳಲು ನೋಡಿ ಕಾಣೆಯಾಗುವವು

ಮಾತಲಿ ಬಾರದೆ ಅಳಿದುಳಿದವು ಮನಸಿನ ಖಜಾನೆ‌ ಸೇರುವವು
ಹಾಗೊಮ್ಮೆ ಹೀಗೊಮ್ಮೆ ನೆನಪಾದಾಗ ದರುಶನ ತೋರಿ ಹಿಂದಿರುಗುವವು
ಆಗಾಗ ಬೇಡದವು ತುಂಬಿ ಕೆದಕಿ‌ ಏನೋ‌ ಹುಡುಕುವಾಗ ಕಾಡಿಸಿ ನೋಯಿಸುವವು
ಪಟ್ಟಿಡಿದು ಕುಳಿತಾಗ ಕಾಡಿದವೆಲ್ಲ ಒಂದೊಂದೆ ಖಾಲಿಯಾಗುವವು

ಒಂದಿಷ್ಟು ಸಂತೋಷದ ಮಾತು
ಮತ್ತೊಂದಷ್ಟು ನೋವುಗಳ‌‌ದೆ ಮಾತು
ಮಾತಲಿ ‌ಬರಲಾಗದೆ ಭಾರವಾಗುವು
ಖಾಲಿಯಾದ ಜಾಗವ ಬಂದು ಸೇರುವವು
ಶುರು ಮತ್ತದೆ ಮಾತು ಮೌನದಾಟ
ಮಾತಲಿ ಹೇಳಿ‌ ಮುಗಿಯದ ಪೀಕಲಾಟ

- ಶ್ರೀಕಾವ್ಯ

04 Jun 2017, 08:57 am
Download App from Playstore: