ಕವಿದಿರಲು ಕಾರಿರುಳು.....
ಚಂದಿರನಿಲ್ಲ ಇರುಳಿನಲಿ
ಕವಿದಿರಲು ಕಾರಿರುಳು ಎದೆಯಲಿ
ಚುಕ್ಕಿ ತಾರೆಗಳು ಕಳುವಾಗಿವೆ ಬಾನಿನಲಿ
ಕುಳಿತಿರುಲು ನಾನು ಇಲ್ಲಿ ಮೌನದಲಿ....
ಹುಡುಕುತ ಹೋಗಲೇನು ಆ ಬೆಳದಿಂಗಳ
ಕಾದು ಬಂದ ಮೇಲೆ ನೋಡಲೇನು ನಗುವ ತಿಂಗಳ
ನನಗೂ ಬೇಕಿದೆ ಮಿನುಗುವ ಚುಕ್ಕಿಗಳ ಸಹವಾಸ
ಸೇರಿ ಹೋಗಲೇನು ಅವುಗಳ ಮುಗಿಸಿ ವನವಾಸ .....
ಹೂತಿರುವೆ ನೋವುಗಳ ಮೇಲೆ ಕಲ್ಲ ಎಳೆದು
ಕಣ್ಣ ಹನಿ ಹಿಡಿದಿಟ್ಟಿರುವೆ ನನ್ನಲೆ ಕದ್ದು
ನಗುವೆನು ಖುಷಿಯ ಮುಖವಾಡವ ಹೊದ್ದು
ಕಳುಹಿಸಿ ಬಿಡಲೆ ಮನಸನೆ ನನ್ನಿಂದಲೆ ಒದ್ದು .....
ಆ ಶಶಿಯ ಮರುಹುಟ್ಟು ನೋಡಿ ನಗುತ ಬದುಕುವೆನು
ಇರುಳಲು ಹೊಳೆಯುವ ಚುಕ್ಕೆಯ ನೋಡಿ ಮಿನುಗುವೆನು
ನನಗೂ ಆ ಶಶಿಯಂತೆ ಮರು ಜನ್ಮ ಸಿಗುವುದೇನು
ಮನಸಿನ ಕಾರಿರುಳ ಒಪ್ಪಿ ನಗುತ ಹೊಳೆಯಬಲ್ಲೆನೇನು......
- ಶ್ರೀಕಾವ್ಯ
14 Jun 2017, 11:24 pm
Download App from Playstore: