ಅಪ್ಪನೆಂಬ ಅಚ್ಚಿನಲ್ಲಿ...

ಸಿಡಿಲು, ಭೂಕಂಪ, ಬೆಂಕಿ
ಜ್ವಾಲಾಮುಖಿಯ ಸುಡುಸುಡು
ಬಗ್ಗಿಸಲಾಗದ ಕಬ್ಬಿಣ...
ಅಪ್ಪನೆಂದರೆ ಹೀಗೇ ಇತಿಹಾಸ
ಸಧ್ಯಕ್ಕೆ ವರ್ತಮಾನ!

ಅದೊಂದು ಮುಖವಾಡ!
ತಿರು ತಿರುಗುವ ಬದುಕಿನ ಗಾಣ
ಪುಡಿ ಮಾಡಿ ಮಣ್ಣ ಸೇರಿಸಿ
ಅವನೀಗ ಮಣ್ಣಲ್ಲಿ ನಿಂತಿದ್ದಾನೆ
ಮಣ್ಣು ಮೆತ್ತಿಕೊಂಡಿದ್ದೋ
ಹಿಂದಿನವರ್ಯಾರೋ ಇಟ್ಟ
ಅಪ್ಪನೆಂಬ ಅಚ್ಚಿನದ್ದೋ!

ಗೊಂದಲದ ಗೂಡಿನಲ್ಲೀಗ ಗುಬ್ಬಿ
ಕಳಚಿಕೊಂಡಿದೆಯಾ ರೆಕ್ಕೆ?
ರೆಕ್ಕೆಯಿಲ್ಲದೆಯೂ ಹಾರಬಲ್ಲದು ಹಕ್ಕಿ
ಮರಿಗಳು ಮುಗಿಲು ಮುಟ್ಟಿವೆ!
ಕಲಿಸಿದ್ಯಾರು, ಕಲಿತಿದ್ಯಾರು?
ನೆರಳು ಅವಳದ್ದು; ಮಕ್ಕಳ ಅಮ್ಮನದ್ದು
ಗೂಡಿನಲ್ಲೇ ಗುಬ್ಬಿ ಗುಟುರುತ್ತದೆ

ನಾನಲ್ಲ
ಅದ್ಯಾವುದೂ ನಾನಲ್ಲ
ನಾನು ಅವನಾಗುವ ಮೊದಲು ಮಗುವಾಗಿದ್ದೆ
ಮಗುವಾಗಿದ್ದಕ್ಕೆ ಅಪ್ಪನಾದೆ
ಯಾರೋ ಕಟ್ಟಿದ ರಂಗಸ್ಥಳದ ಕಟ್ಟುವೇಷವಾದೆ
ಕುಣಿದು ಕುಸಿದೆ
ಕಣ್ಣೀರಿನ ಕೆಸರಾದೆ...

ನನಗೂ ನೋವಿದೆ
ನಿಲ್ಲುವ ಉಸಿರಿದೆ
ಹೇಳಲು ಕಥೆಯಿದೆ
ಬೆತ್ತಲಾಗದೆ ಬಟ್ಟೆಯಾದೆ
ಬಿದ್ದ ಬೆಂಕಿಯಲ್ಲಿ ಕರಟಿದೆ...
ಯಾರೋ ಬರೆದು ಹೋದ
ಚಿತ್ರದ ನಕಲಾದೆ...ಸವೆದುಹೋದೆ
ಅಪ್ಪನೆಂದರೆ ಏನೆಂದು ತಿಳಿಯಲಾಗದೆ
ಮತ್ತೆ ಅವಳೊಡಲ ಮಗುವಾದೆ!
-ಆರುಡೋ ಗಣೇಶ

- ಆರುಡೋ ಗಣೇಶ

18 Jun 2017, 02:42 pm
Download App from Playstore: