ನಮ್ಮ ಕೋಲಾರ

ಬನ್ನಿ ಒಮ್ಮೆ ನಮ್ಮೂರಿಗೆ..
--------------------

ನೋಡ ಬನ್ನಿ ನಮ್ಮೂರ
ನಿಮಗೆ ಚಿನ್ನ ರೇಷ್ಮೆ ಹಾಲು ಕೊಟ್ಟ ಕೋಲಾರ..

ನಮ್ಮ ಊರು ಮಾಲೂರು
ಶಿವಾರಪಟ್ಟಣ ಶಿಲ್ಪಿಗಳ ತವರು
ಕಲ್ಲುಗಳಿಗೆ ಇಲ್ಲಿ ಜೀವ ತುಂಬುವರು..

ಕನ್ನಡದ ಆಸ್ತಿ
ನಮ್ಮ ಕವಿ ಮಾಸ್ತಿ
ಅವರು ನಮ್ಮವರೆಂಬ ಹೆಮ್ಮೆ ನಮಗೆ ಸ್ವಲ್ಪ ಜಾಸ್ತಿ..

ಶ್ರೀನಿವಾಸ ನೆಲೆಸಿರುವ ಚಿಕ್ಕತಿರುಪತಿ
ಬರುವ ಭಕ್ತರ ಸಂಖ್ಯೆ ಚಿಕ್ಕದಲ್ಲ ದೊಡ್ಡದಿದೆ ಖ್ಯಾತಿ..

ಬಂಗಾರವನ್ನು ಮೂಟೆಗಳಲ್ಲಿ ತಂದು ಮಾರುತಿದ್ದರಂತೆ ಬಂಗಾರಪೇಟೆಯಲ್ಲಿ
ಹೈದರ್ ಆಲಿ ಹುಟ್ಟಿದ್ದು ಇಲ್ಲೇ ಬೂದಿಕೋಟೆಯಲ್ಲಿ..

ಚಿನ್ನವನ್ನು ಬಗೆಯುತಿದ್ದ ಕೋಲಾರ ಗೋಲ್ಡ್ ಫೀಲ್ಡಲಿ
ಗೋಲ್ಡು ಖಾಲಿಯಾಗಿ ಈಗ ಫೀಲ್ಡು ಮಾತ್ರ ಉಳಿದಿದೆ..
ಇಲ್ಲಿನ ಜನಪ್ರಿಯ ಆಟ ಕಾಲ್ಚೆಂಡು
ಇಂಗ್ಲಿಷರ ಪ್ರಭಾವದಿಂದ ಇದೊಂದು ಮಿನಿ ಇಂಗ್ಲೆಂಡು..

ಕೋಟಿಲಿಂಗ ದರ್ಶಿಸಿದರೆ ಕೋಟಿ ಪಾಪ ಕಳೆವುದು
ಗುಟ್ಟಹಳ್ಳಿಯ ಬೆಟ್ಟದಲ್ಲಿ ಸಕಲ ಪುಣ್ಯ ಸಿಗುವುದು..

ಕಗ್ಗದ ಸಿರಿ ಡಿವಿಜಿ ಯವರು ಹುಟ್ಟಿದ ಮುಳಬಾಗಿಲು
ನಮ್ಮ ಕರ್ನಾಟಕದ ಹೆಬ್ಬಾಗಿಲು..
ಇಲ್ಲಿನ ಆಂಜನೇಯ, ಆವಣಿಯ ರಾಮ, ವಿರೂಪಾಕ್ಷಿ, ಕೊಲದೇವಿ, ಕುರುಡುಮಲೆ, ನರಸಿಂಹ ತೀರ್ಥ
ಎಲ್ಲಾ ದರ್ಶನದಿಂದ ನಿಮಗೆ ಸಿಗುವುದು ಪರಮಾರ್ಥ..

ಶ್ರೀನಿವಾಸಪುರದಲಿ
ಎಲ್ಲಿ ನೋಡಿದರೂ ಮಾವು..

ಸಿಹಿಗೆ ಹೆಸರು ಇಲ್ಲಿನ ಮಾವು
ದೇಶ ವಿದೇಶಕ್ಕೂ ಕಳಿಸುತ್ತೇವೆ ಇಲ್ಲಿಂದ ನಾವು..


ನಗರವನ್ನು ಕಾಯುತ್ತಿರುವ
ಕೋಲಾರಮ್ಮ ಸೋಮೇಶ್ವರ ದೇವಸ್ಥಾನಗಳು
ಮನಮೋಹಕ ಶಿಲ್ಪಕಲೆಗೆ ಉದಾಹರಣೆಗಳು..

ಶತಶ್ರೃಂಗದ ಕಣಿವೆಯಲಿ
ಹಿತಕರವಾದ ಪರಿಸರದಲಿ
ಶಿವನ ಸನ್ನಿಧಿಯಲ್ಲಿ
ಸದಾ ಸಿಹಿನೀರ ಸುರಿಸುತ್ತಾಳೆ ಅಂತರಗಂಗೆ..
ಇಲ್ಲಿ ಬಿಟ್ಟರೆ ಎಲ್ಲ ಕಡೆ ತೊಟ್ಟು ಹನಿಗೂ ಪರದಾಟ ಏಕೆ ಮುನಿಸಿಕೊಂಡಿದ್ದಾಳೋ ಹರಹರ ಗಂಗೆ..

ನೀರಿಲ್ಲದಿದ್ದರೂ ಅತಿ ಹೆಚ್ಚು ತರಕಾರಿ ಬೆಳೆಯೋರು ನಾವು
ಒಂದಿಷ್ಟು ನದಿ ನಾಲೆ ಇದ್ದಿದ್ದರೆ ಇನ್ನೆಷ್ಟು ಬೆಳೆಯುತ್ತಿದ್ದೆವು
ಯೋಚಿಸಿ ನೀವು..

ಎಲ್ಲರ ನೀರಿಲ್ಲದಿದ್ದರೇನಂತೆ..
ಪ್ರೀತಿಯ ಪನ್ನೀರ ಕೊಡುತ್ತೇವೆ..
ಒಮ್ಮೆ ಬನ್ನಿ ಇಲ್ಲಿಗೆ..
ಇಲ್ಲಿನ ಜನರ ಮನಸು ಮಲ್ಲಿಗೆ..

- ವಾಸು ಕೋಲಾರ

04 Jul 2017, 04:43 pm
Download App from Playstore: