|| ಮೊದಲ ಮಳೆ ||

ಮೊದಲ ಮಳೆಯ ಮಣ್ಣಿನಿಂದ
ಕಂಪು ಬೀಸಿದೆ ಘಮ್ಮನೆ.
ಮನದ ಹೆಗಲಿಗೆ ಮೃಣ್ಮಯವು
ಹೆಗಲಿಟ್ಟು ನಡೆದಿದೆ ಸುಮ್ಮನೆ.

ಮೊದಲ ಮಳೆ ಮೊದಲಲ್ಲ ತಿಳಿ
ಯುಗಯುಗಗಳಡಗಿದೆ ಕಂಪಲಿ.
ಆಘ್ರಾಣಿಸುತ ಪಯಣಿಸಿದೆ ಮನ
ಗತಕಾಲದೂರಿನ ಬಯಲಲಿ.

ನೂರು ಮರ್ಮರ ಮಾತನಾಡಿದ
ಹಳೆಯ ಎಲೆಗಳ ಧನಿಯಿದೆ.
ಭೀಮ ಮರವು ಜನ್ಮ ತಾಳಿದ
ಬೀಜ ಬಿರಿದ ಸದ್ದಿದೆ.

ಕಂಪು ಕಾರುವ ತಂಪಿನಲ್ಲಿ
ಉತ್ತ ರೈತನ ಉಸಿರಿದೆ.
ದೇಶಸೇವೆಗೆ ದೇಹ ತ್ಯಜಿಸಿದ
ವೀರ ರಕ್ತದ ಬಿಸಿಯಿದೆ.

ಪಥನಗೊಂಡ ರಾಜಕುಲವಿವೆ
ಸಾಮ್ರಾಜ್ಯಗಳಳಿವಿವೆ.
ಕೋಟೆ ಕೊತ್ತಲ ಗುಡಿ ಮನೆ ಮಠ
ಮಣ್ಣಿಗಿಳಿದ ಕುರುಹಿದೆ.

ಭುವಿಯ ಉತ್ಕ್ರಾಂತಿ ಕ್ರಿಯೆಯಲಿ
ಮೊದಲ ಮಳೆಯೆ ಅತಿಥಿಯು.
ಜೀವದುಗಮದ ದಿವ್ಯ ಕಥೆಯನು
ಸಾರುತಿದೆ ಮಣ್ಗಂಧವು.

ಬಿಸಿ ಮಣ್ಣಿನಲಿ ಹುಸಿಯಿರದ ಕಥೆ
ಹೊಸ ಮಳೆಗೆ ತೆರೆದಿದೆ ಮೆಲ್ಲನೆ.
ಮನ ನೆಲದಲಿ ಕವಿಶಿಶುವು ಮುಕ್ಕಿದೆ
ಭಾವಗಳ ಹಸಿ ಮಣ್ಣನೆ!

- ಚಂದ್ರಹಾಸ

- Chandrashekar

06 Jul 2017, 09:46 am
Download App from Playstore: