ನಿನ್ನುಸಿರು ನಾನು
ಮರೆತಿರುವೆ ನೀನು.....
ಆಮ್ಲಜನಕದ ಜನಕನು ನಾನು
ಈ ಧರೆಯೊಳು
ನಿನ್ನೆಲ್ಲ ಮಲಿನವ ನುಂಗುವೆನು
ಹಗಲಿರುಳು!
ಇಂಪಾದ ಗಾನದಿ ನಿನ್ನ ತಣಿಸುತ್ತ
ಮುಂಜಾನೆಯ ಸಿಹಿಯುಣಿಸುತ್ತ
ಮೈ ಮರೆಸುವ ವಿಧ- ವಿಧದ
ಪಕ್ಷಿ ಸಂಕುಲದ ತವರು ನಾನು!
ಸುಡುವ ನೇಸರನು ಮುನಿದು
ನೆತ್ತಿಗೇರಿದಾಗ
ತಂಪಾದ ಗಾಳಿಯ ಸವಿದು
ತಣಿವೆ ನೀನಾಗ!
ಕುಲ,ಮತಗಳ ಬೇದ ನನಗಿಲ್ಲ
ಮೃಗ -ಪಕ್ಷಿ, ನರರಿಗೆಲ್ಲ
ಮಾಡುವೆನು ಒಳಿತೆಂದು
ಬಯಸೆನು ಕೆಡುಕೆಂದೆಂದು!
ನಿನ್ನ ಜನನದಿ ಮೊದಲಿಗೆ
ಮಲಗುವೆ ನನ್ನ ಮಡಿಲಲ್ಲಿ
ಜೀವನ ಯಾತ್ರೆಯ ಕೊನೆಗೆ
ಸಾಗುವೆ ನೀನು ನನ್ನ ಕರದಲ್ಲಿ!
ನನ್ನ ಕೊಂದು ನಿರ್ಮಿಸುವೆ
ವೈಭವದ ಮನೆಯ ನಿರ್ಜೀವದ ಕರಕುಶಲ ವಸ್ತುಗಳಿಗಾಗಿ
ನನ್ನ ಉಸಿರ ನೀ ತೆಗೆವೆ!
ನಗರೀಕರಣದ ನೆಪದಲ್ಲಿ
ಬಗೆಯುತಿರುವೆ ನನ್ನ ತವರಲ್ಲಿ
ರಸ್ತೆಯ ಹಗಲೀಕರಣದಲ್ಲಿ
ಮಾಡುವೆ ಮಾರಣಹೋಮವನಿಲ್ಲಿ!
ನಿನ್ನ ದುರಾಸೆಯಿಂದ
ನಾ ಬಿಡುವೆ ನನ್ನ ಪ್ರಾಣವ
ನನ್ನ ನಂಬಿದ್ದವರು
ನಿರಾಶ್ರಿತರು ನಿನ್ನಿಂದ!
ನಾ ಕಾಯುವೆ ನಿನ್ನುಸಿರ
ನನ್ನುಸಿರ ಕೊನೆಯವರೆಗೆ
ನೀ ತೆಗೆವೆ ನನ್ನುಸಿರ
ಮರೆಯದಿರು, ನೀಕೊರಗುವೆ ಕೊನೆಗೆ!
ಶಾರಧ
- ಶಕುಂತಲಾ
06 Jul 2017, 01:30 pm
Download App from Playstore: