ನನ್ನ ತವರೂರು

ನನ್ನ ತವರೂರು ಬಲು ದೂರ ಗೆಳತಿ
ಅಲ್ಲಿ‌ ನನ್ನ ತಾಯಿ ಮನೆ ಆಳೋ ಒಡತಿ!!
ಕಣ್ಣ ಮುಂದಿರುವ ಆ ತಾಯಿ ಮಮತೆ
ನನ್ನ ಕರೆದಿಹುದು ಬಾ ಕಂದ ಎನುತ!!

ಹೆತ್ತ ತಾಯಿಗೆ ನಾ ಮಡಿಲ‌ ಮಗುವಾಗಿದ್ದೆ
ನಕ್ಕು ನಗಿಸುತ್ತ ನಾ ದಿನ ನಲಿಯುತ್ತಿದ್ದೆ!!
ಚಪ್ಪರಕ್ಕೆ ಉಯ್ಯಾಲೆ ಕಟ್ಟಿ ಜೀಗುತ್ತಿದ್ದಳು
ತಾಯಿ ನಗು ನಗುತ ನನ್ನನ್ನು ಅಪ್ಪಿ!!

ಅಂಗಳದ ರಂಗೋಲಿಯಲ್ಲಿ ಅಂದು
ಬಾನ‌ ಚಂದಿರನ ಕರೆತರಲು ನನ್ನ ವಿಲಾಪ!!
ಬಾನಿಗೆ ಮುಖವೊಡ್ಡಿದ ಕನ್ನಡಿಯ ಒಡನೆ
ಬಾನ ಚಂದಿರನ ಆಗಮನದ ಸಂಭ್ರಮ!!

ಇರುಳಿನಲ್ಲಿ ಭಯಗೊಂಡು ಅತ್ತಾಗ
ತಾಯಿ ಎದೆಗೆ ಒರಗಿ ಪಡೆದಂತಹ ಸಾಂತ್ವನ!!
ತಾಯಿ ಮಡಿಲಲ್ಲಿ ಮಲಗಿರಲು ನಾನು
ಅವಳ ಜೋಗುಳದ ಪರಿ ಹೇಳತೀರದು!!

ಅವಳನು ನೋಡಲು ಕಾದ ನನ್ನ ಕಂಗಳು
ನೆನೆದಾಗ ಕಂಬನಿಯ ತಾ ಮಿಡಿದಿವೆ!!
ದೂರ ಇರುವ ನನ್ನ ತವರೂರಿಗೆ ನಾನು
ಇಂದು ಹೊರಟಿರುವೆ ಸಂಭ್ರಮದಿ ಗೆಳತಿ!!

- ಪಿ.ಜಿ.ಜ್ಯೋತಿ

09 Aug 2017, 08:52 am
Download App from Playstore: