ಮನಸಿಗೆ ಸಂಗಾತಿಯ ಹುಡುಕುತಿರುವೆ...
ಮನಸಿಗೆ ಸಂಗಾತಿಯ ಹುಡುಕುತಿರುವೆ
ಜೀವವಿರುವುದೊ, ಇಲ್ಲದ್ದೊ
ಹುಡುಗನೊ, ಹುಡುಗಿಯೊ
ಅಂದ ಚೆಂದದ ಮಗುವೊ
ಬಣ್ಣ ಕಳೆದ ಅಂದವಿರದ ಪ್ರಾಣಿಯೊ
ಅಜ್ಜನೊ, ಅಜ್ಜಿಯೊ
ಕುರಿಯೊ ,ಕೋಳಿಯೊ
ಕಾಗೆಯೊ,ಗಿಳಿಯೊ
ಕೋತಿಯೊ, ನಾಯಿಯೊ
ಮರವೊ ,ಗಿಡವೊ
ಗೊಂಬೆಯೊ ಇಲ್ಲ ಮರದ ಕೊಂಬೆಯೊ
ಪಾತಾಳಲೋಕದ್ದೊ, ಆಕಾಶಕಾಯದ್ದೊ
ದೇವರಾದ ಕಲ್ಲೊ, ಕಲ್ಲಾಗಿರುವ ದೇವರೊ
ಮನಸಿಗೆ ಸಂಗಾತಿಯ ಹುಡುಕುತಿರವೆ
ಮನಸಾರೆ ನಗುವಾಗ ನಗುತಿರುವೆನೆಂದು
ಅಳಬೇಕೆನಿಸಿದಾಗ ಅಳಬೇಕೆಂದು
ಕಷ್ಟದೊಳಗೆ ಕಷ್ಟವೆಂದು
ಸುಖದೊಳಗೆ ಸುಖವೆಂದು
ಕೋಪದೊಳು ಕೋಪ ತೋರಿ
ಹರುಷದೊಳು ಹರುಷ ತೋರಿ
ಮನಸಿನ ಲೋಕವ ಮುಖದಲಿ ಮರೆಸದೆ
ಮುಖದ ಭಾವವು ನನ್ನನೆ ಆವರಿಸಿದಂತೆ
ನಾನು ನಾನಾಗಿ, ನನ್ನೊಳಗಿನ ಭಾವಕೆ ಬಣ್ಣ ಹಚ್ಚದೆ
ಜಗಕೆ ನಾನು ನಟನೆಯ ತೋರದೆ
ಹೊರಗಿನ ನಾನು, ಒಳಗಿನ ನಾನು ಒಂದೆ ಎಂಬಂತೆ ಇರಲು
ಮನಸಿಗೆ ಸಂಗಾತಿಯ ಹುಡುಕುತಿರುವೆ...
- ಶ್ರೀಕಾವ್ಯ
23 Aug 2017, 09:53 pm
Download App from Playstore: