ಸೂರ್ಯೋದಯ...

ಉದಯಿಸುತಿರುವ ಹೊಂಬಣ್ಣದ ನೇಸರ
ಉದಯದಲಿ ಕೆಂಪಾಯಿತು ನೀಲಾಂಬರ
ಮುಸುಕಿದ ಮಂಜಿಂದ ಕಿರೀಟದ ಅಲಂಕಾರ
ಮುಂಜಾವಿನಲಿ ಪಡೆದಿದೆ ಆ ಗಿರಿಯ ಶಿಖರ

ಉಸಿರೆ ಕಳೆದೋದಂತೆ ಮಂಕಾದ ಹಸಿರು
ಬೆಳಗಿನ ಹಿಬ್ಬನಿಯ ಪ್ರೀತಿಗೆ ಪಡೆದಿದೆ ನವಿರಾದ ಉಸಿರು
ಹಿಬ್ಬನಿಯು ಮುತ್ತಿಕ್ಕಿರಲು ಭುವಿಯ ಒಡಲ
ಎಲೆಯಂಚಿನನಿ ಬೀಸಿದೆ ಪ್ರಕೃತಿಯೆಡೆಗೆ ಪ್ರೇಮದ ಜಾಲ

ಕತ್ತಲಲಿ ಹೆದರಿ ಮುದುಡಿದ್ದ ಕುಸುಮ ರಾಶಿ
ಸೂರ್ಯ ರಶ್ಮಿಯು ತಾಕಿ ಅರಳಿತ್ತು ಖುಷಿಯ ಸೂಸಿ
ಗೂಡು ಸೇರಿದ್ದ ಹಕ್ಕಿಗಳು ಕಣ್ಣು ಮುಚ್ಚಿ
ಇಂಚರ ಪಾಡುತ ಹಾರಿವೆ ಮನಸು ಬಿಚ್ಚಿ

ಕತ್ತಲ ತೋರಿಸಿ ಎದೆಯೊಳಗೆ ನಡುಕ ಹುಟ್ಟಿಸಿದ ರವಿ
ಮರುಹುಟ್ಟು ಪಡೆದು ಬರುವ ತಿಳಿಸಿ ಹೇಳಲು ಬಾಳ ಸವಿ
ಕಣ್ತುಂಬಿಕೊಳ್ಳಲು ಆ ಉದಯ ಕಾಲದ ಸೌಂದರ್ಯ
ಹಗುರಾಗುವುದು ಮನುಜನ ಆಂತರ್ಯ

- ಶ್ರೀಕಾವ್ಯ

11 Sep 2017, 09:34 am
Download App from Playstore: