ಚೆಂದುಟಿಯ ಅಂಚಿನಲಿ ನಗುವಿರಲಿ ಶಾಶ್ವತ

ನೊಂದಿರುವ ಜೀವವಿದು ನೀಡದಿರು ನೋವ
ನಿನ ಹೆಸರ ಜಪಿಸುತಿದೆ ಪ್ರತಿಕ್ಷಣವು ಜೀವ
ಮನವೆಂಬ ಮನೆಯಲಿ ಪ್ರೀತಿಯನು ಉಳಿಸು
ಮರುಭೂಮಿ ಹೃದಯಕೆ ಒಲವ ನೀರುಣಿಸು

ಮನೆಯ ಹಿಂಬಾಗಿಲಲಿ ಮುದುಡುತಿದೆ ತಾವರೆ
ಸೌರಭವ ಸೂಸಲು ಬಯಸುತಿದೆ ಅಕ್ಕರೆ
ಅರಿವೊಂದು ಪ್ರಶ್ನಿಸಿದೆ ಮನವನ್ನು ಪ್ರತಿದಿನ
ಉರಿವ ಗಾಯಕ್ಕೇಕೆ ಉಪ್ಪಿನೊಡೆ ಒಡತನ

ನೊಂದ ಮನ ಬೆಳೆಸಿದೆ ಏಕಾಂತದೊಡನೆ ಸ್ನೇಹ
ವಿರಹದಲಿ ಉರಿಯುತಿದೆ ಧೃಡವಾದ ದೇಹ
ಕಣ್ಣಂಚಿನಲಿ ತೊಟ್ಟಿಕ್ಕುತಿದೆ ಕಂಬನಿ
ಕಾಣದಂತೆ ಮುಚ್ಚಿಡಲಿ ಜಿನುಗುತಿಹ ಇಬ್ಬನಿ

ನೋವಿರಲಿ ನನಗೆ ನಲಿವಿರಲಿ ನಿನಗೆ
ಸಂಕ್ಷಿಪ್ತ ಜೀವನದ ಜಂಜಾಟದೊಳಗೆ
ದೇವನಿತ್ತ ಜೀವವಿದು ನಿನಗಾಗೆ ಅರ್ಪಿತ
ಚೆಂದುಟಿಯ ಅಂಚಿನಲಿ ನಗುವಿರಲಿ ಶಾಶ್ವತ..

- ಇಂತಿ ನಿನ್ನ ಬಂಗಾರ

- ನಾಗು

16 Sep 2017, 10:05 am
Download App from Playstore: