ನನ್ನಮ್ಮ

ನನ್ನಮ್ಮ ಲಂಕೇಶರ 'ಅವ್ವ' ನಂತಲ್ಲ
ಕಾದಾಡಿ ಎಲ್ಲರೊಡನೆ‌ ಗುದ್ದಾಡಿ ಗೆಲ್ಲುವುದ ತಿಳಿದವಳಲ್ಲ
ಫಲವತ್ತಾದ ಕಪ್ಪು ನೆಲ , ಬಿಳಿಯ ಹೂವಿನ ಹಬ್ಬವ ಕಂಡವಳಲ್ಲ
ಅಪ್ಪನ‌ ಮೆಚ್ಚಿಸಿ ತೋಳ ಬಂದಿಯ ಗೆಲ್ಲುವ ಕನಸು ಆಕೆಗೆ ದಕ್ಕಲಿಲ್ಲ

ಮುಗ್ಧ ಪ್ರೇಮ ತುಂಬಿದ ನವಿರು ತನದ ಜೀವ
ಯಾರ ಕಂಡರು ಅವಳಿಗೆ ಪ್ರೀತಿ ಭಕ್ತಿ ಭಾವ
ಸಹನಾ ‌ಮೂರ್ತಿ, ಕರಣೆಯಲಿ ಆ ಕಡಲ ರೀತಿ
ನೊಂದರು ಬೆಂದರು ಬರಡಾಗದ ವ್ಯಕ್ತಿತ್ವವೇ ಅವಳ ನೀತಿ

ಯಾರಾದರು ನೋಡೇನಾದರು ಅಂದರೆಂದು ಮನೆಯಿಂದ ಹೊರಗೆಜ್ಜೆ ಇಡಲು ಅಂಜಿಕೆ
ತನ್ನಾಸೆ ಕನಸ ಯಾರಾದರು ಕಂಡಾರೆಂದು ಹೊದಿಸಿದಳು ಹೊದಿಕೆ
ನೋವುಂಡರು ನಕ್ಕಳು, ನಗುವಿದ್ದಾಗಲು ಒಮ್ಮೊಮ್ಮೆ ಅತ್ತಳು
ಅಳುವವರ ಕಂಡಾಗ ಕಣ್ಣೀರ ಒರೆಸಿದಳು, ಹಸಿದವರ ಕಂಡಾಗ ಉಣ್ಣಲು ಬಡಿಸಿದಳು

ಗಂಡನ ದಬ್ಬಾಳಿಕೆ ಕಂಡ ನೋವನು ಪ್ರೀತಿಯಲಿ ‌ಕರಗಿಸಿದವಳು
ತನ್ನವರೇ ಕೇಡ ಬಯಸಿದಾಗಲು ನಗುನಗುತಲೆ ಹರಸಿದವಳು
ಕಡು ಕಷ್ಟ ಕಂಡಾಗಲು‌ ಕೂಗಾಡಲಾಗದೆ ಮೌನದಲೆ ಗೆದ್ದವಳು
ತನ್ನೊಳಗಿನ ಮಾತೆ ಗೌಣವಾದರು ತನ್ನೊಡಲ ಜೀವದಾಸೆಗೆ ಮಾತಾದವಳು

ಬಂದ‌ ನೋವು ಕಷ್ಟವ ಸಹಿಸಿ ‌ಜೀವನ‌ ಪಾಠ, ಅಕ್ಷರದ ಬೆಳಕ ತೋರಿದವಳು
ಒಂದೊತ್ತು ಹಸಿದರು ಸ್ವಾಭಿಮಾನವ ತುಂಬಿದವಳು
ಕಥೆಯಾಗಿ ‌ಮಹಾ ವ್ಯಕ್ತಿಗಳ ಚರಿತ್ರೆಯ, ಪಂಚತಂತ್ರದ ನೀತಿಯ ಕಲಿಸಿದಳು
ಬದುಕಿಗೆ ಕನಸ , ಆ ಕನಸುಗಳಿಗೆ‌ ಗಟ್ಟಿ, ಶುದ್ಧತನವ ತೋರಿದವಳು

ತನ್ನೆದೆಯೇ ಸುಟ್ಟರು ‌ಮಕ್ಕಳಿಗೆ ಕನಸುಗಳ‌ ಬಿತ್ತಿದಳು
ದುಡಿದಳು,‌ಕೂಡಿಟ್ಟಳು, ಮನ ಮನೆಯ ಸಂಭಾಳಿಸಿದಳು
ತಾ ಕಾಣದೆ ದೂರಾದ ವಿಚಾರ,ಜ್ಞಾನ, ವಿಜ್ಞಾನ, ಸುಜ್ಞಾನವ ಮಕ್ಕಳೊಳಗೆ ಬೆಳೆಸಿದಳು
ತನ್ನೆಲ್ಲ ‌ಬದುಕ ಮನೆ ಮಕ್ಕಳಿಗಾಗಿಯೆ ಧಾರೆ ಎರೆದವಳು

ಈ ನನ್ನಮ್ಮನಿಗೆ ಏನನು ‌ಅರ್ಪಿಸುವುದು
ಜೀವವೊ, ಜೀವನವೊ, ನಗುವೋ ನನ್ನಳುವೋ
ಎಲ್ಲವೂ ಅವಳಿಂದಲೆ ಪಡೆದ್ದದ್ದು
ಅವಳ ಬಿಟ್ಟು ಏನಿಲ್ಲ ನನದೆಂದೂ ಉಳಿದದ್ದು
ಏನೆ ಅರ್ಪಿಸಿ ಸಮರ್ಪಿಸಿದರು ಅವಳ‌ ಋಣವೆಂದು ತೀರದ್ದು

- ಶ್ರೀಕಾವ್ಯ

07 Oct 2017, 05:43 pm
Download App from Playstore: